×
Ad

ಇಂದು ಮೊದಲ ಟ್ವೆಂಟಿ-20: ಭಾರತಕ್ಕೆ ಶ್ರೀಲಂಕಾ ಎದುರಾಳಿ

Update: 2020-01-05 10:23 IST

ಗುವಾಹಟಿ, ಜ.4: ಶ್ರೀಲಂಕಾ ವಿರುದ್ಧ ರವಿವಾರ ಇಲ್ಲಿ ನಡೆಯುವ ವರ್ಷದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾ ಗಿದೆ. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ದೀರ್ಘ ಸಮಯದ ಬಳಿಕ ತಂಡಕ್ಕೆ ವಾಪಸಾಗುತ್ತಿದ್ದು, ಎಲ್ಲರ ಚಿತ್ತ ಅವರ ಮೇಲಿದೆ.

ಬೆನ್ನುನೋವಿನಿಂದಾಗಿ ಸುಮಾರು 4 ತಿಂಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ 26ರ ಹರೆಯದ ಬುಮ್ರಾ ಭಾರತದ ಬೌಲಿಂಗ್‌ನಲ್ಲಿ ಅಮೂಲ್ಯ ರತ್ನವಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಅವರ ಮಧ್ಯಪ್ರವೇಶದ ಬಳಿಕ ಗುಜರಾತ್‌ನ ಪರ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನಾಡುವುದರಿಂದ ಬುಮ್ರಾಗೆ ವಿನಾಯಿತಿ ನೀಡಲಾಗಿದೆ. ಭಾರತ 2019ರಲ್ಲಿ 50 ಓವರ್ ಮಾದರಿಯ ಕ್ರಿಕೆಟ್‌ನತ್ತ ಹೆಚ್ಚು ಗಮನ ನೀಡಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೆಗಾ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸುವ ಮೊದಲು ಭಾರತೀಯ ಕ್ರಿಕೆಟ್ ತಂಡ ಸುಮಾರು 15 ಟ್ವೆಂಟಿ-20 ಪಂದ್ಯಗಳಲ್ಲಿ ಆಡಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ಬಳಿಕ ಟ್ವೆಂಟಿ-20 ತಂಡದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆಂಬ ಸ್ಪಷ್ಟ ಚಿತ್ರಣ ಲಭಿಸಲಿದೆ.

ಅಸ್ಸಾಂನ ಅತ್ಯಂತ ದೊಡ್ಡ ನಗರದಲ್ಲಿರುವ ಬರ್ಸಾಪಾರ ಸ್ಟೇಡಿಯಂನಲ್ಲಿ ರವಿವಾರ ಪಂದ್ಯ ನಡೆಯಲಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯ ಬಳಿಕ ನಗರವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.

ಮುಹಮ್ಮದ್ ಶಮಿ(ವಿಶ್ರಾಂತಿ), ದೀಪಕ್ ಚಹಾರ್(ಗಾಯದ ಸಮಸ್ಯೆ)ಹಾಗೂ ಭುವನೇಶ್ವರ ಕುಮಾರ್(ಗಾಯದ ಸಮಸ್ಯೆ) ಅವರ ಅನುಪಸ್ಥಿತಿಯಲ್ಲಿ ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ ಅವರು ಬುಮ್ರಾರೊಂದಿಗೆ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಅಥವಾ ಯಜುವೇಂದ್ರ ಚಹಾಲ್ ಅವಕಾಶ ಪಡೆಯಬಹುದು.

ರಿಷಭ್ ಪಂತ್ ಅವರ ಸ್ಥಿರ ಪ್ರದರ್ಶನ ಬಗ್ಗೆ ಪ್ರಶ್ನೆ ಉದ್ಭವಿಸಿದ್ದು, ಕೇರಳದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಸಂಜು ಸತತ 6 ಟ್ವೆಂಟಿ-20 ಪಂದ್ಯಗಳಲ್ಲಿ ಅವಕಾಶ ಸಿಗದೆ ಹತಾಶರಾಗಿದ್ದಾರೆ. ಮಂಡಿನೋವಿನಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗುತ್ತಿರುವ ಶಿಖರ್ ಧವನ್‌ಗೆ ಈ ಸರಣಿಯು ಅತ್ಯಂತ ಮುಖ್ಯವಾಗಿದೆ. ಧವನ್ ಅವರು ಉಪ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ರೋಹಿತ್ ಬದಲಿಗೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

 ದಿಲ್ಲಿಯ ಎಡಗೈ ಬ್ಯಾಟ್ಸ್‌ಮನ್ ಧವನ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ಬಳಿಕ ರಣಜಿ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್‌ನ ವಿರುದ್ಧ 140 ರನ್ ಗಳಿಸಿದ್ದರು. 2019ರಲ್ಲಿ 12 ಟ್ವೆಂಟಿ-20 ಇನಿಂಗ್ಸ್‌ಗಳಲ್ಲಿ 272 ರನ್ ಗಳಿಸಿದ್ದ ಧವನ್ ಈ ವರ್ಷವೂ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಚಮತ್ಕಾರ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಶ್ರೀಲಂಕಾ ತಂಡ ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 0-3 ಅಂತರದಿಂದ ಸೋಲುಂಡಿತ್ತು. ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ ಟ್ವೆಂಟಿ-20 ಸರಣಿಯ 3 ಪಂದ್ಯಗಳಲ್ಲಿ 100 ರನ್ ಗಳಿಸಿದ್ದ ಕುಶಾಲ್ ಪೆರೇರ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.

ಶ್ರೀಲಂಕಾ ತಂಡ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್‌ರಿಂದ ಭಾರೀ ನಿರೀಕ್ಷೆಯಲ್ಲಿದೆ. ಮ್ಯಾಥ್ಯೂಸ್ 2018ರ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಕೊನೆಯ ಬಾರಿ ಟಿ-20 ಪಂದ್ಯ ಆಡಿದ್ದರು. ಪಾಕಿಸ್ತಾನ ವಿರುದ್ಧ ಅಕ್ಟೋಬರ್‌ನಲ್ಲಿ ಲಂಕಾ ತಂಡ 3-0 ಅಂತರದಿಂದ ಸರಣಿ ಜಯಿಸುವ ನಿಟ್ಟಿನಲ್ಲಿ ಭಾನುಕ ರಾಜಪಕ್ಸ, ಒಶಾಡ ಫೆರ್ನಾಂಡೊ ಹಾಗೂ ದನುಷ್ಕಾ ಗುಣತಿಲಕ ಪ್ರಮುಖ ಕೊಡುಗೆ ನೀಡಿದ್ದರು. ಲೆಗ್ ಸ್ಪಿನ್ನರ್ ವನಿಂದು ಹಸರಂಗ ಪಾಕ್ ವಿರುದ್ಧ ಲಂಕಾದ ಬೌಲಿಂಗ್ ದಾಳಿ ಮುನ್ನಡೆಸಿದ್ದು, 3 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಉರುಳಿಸಿದ್ದರು. ಆದರೆ, ಹಸರಂಗ ಆಸ್ಟ್ರೇಲಿಯ ವಿರುದ್ಧ ಮಿಂಚಲು ವಿಫಲರಾಗಿ   ದ್ದರು. 2017ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಗುವಾಹಟಿಯಲ್ಲಿ ನಡೆದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಸೋತಿತ್ತು. ಪಂದ್ಯ ಮುಗಿದ ಬಳಿಕ ಟೀಮ್ ಬಸ್ ಹೊಟೇಲ್‌ಗೆ ವಾಪಸಾಗುತ್ತಿದ್ದ ವೇಳೆ ಕಲ್ಲುತೂರಾಟ ನಡೆದ ಘಟನೆ ನಡೆದಿತ್ತು. ಕೊಹ್ಲಿ ಪಡೆಗೆ ಗುವಾಹಟಿಯಲ್ಲಿನ ಕಳಪೆ ದಾಖಲೆ ಸರಿಪಡಿಸಲು ಮತ್ತೊಂದು ಅವಕಾಶ ಲಭಿಸಿದೆ.

ತಂಡಗಳು

► ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್, ರಿಷಭ್ ಪಂತ್(ವಿಕೆಟ್‌ಕೀಪರ್), ಶಿವಂ ದುಬೆ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ ಹಾಗೂ ವಾಷಿಂಗ್ಟನ್ ಸುಂದರ್.

► ಶ್ರೀಲಂಕಾ: ಲಸಿತ್ ಮಾಲಿಂಗ(ನಾಯಕ), ದನುಷ್ಕಾ ಗುಣತಿಲಕ, ಅವಿಷ್ಕಾ ಫೆರ್ನಾಂಡೊ, ಆ್ಯಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಕುಸಾಲ್ ಪೆರೇರ, ನಿರೊಶನ್ ಡಿಕ್ವೆಲ್ಲಾ, ಧನಂಜಯ ಡಿಸಿಲ್ವಾ, ಇಸುರು ಉದಾನ, ಭಾನುಕ ರಾಜಪಕ್ಸ, ಒಶಾಡ ಫೆರ್ನಾಂಡೊ, ವನಿಂದು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷಣ್ ಸಂಡಕನ್ ಹಾಗೂ ಕಸುನ್ ರಜಿಥ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News