ಎನ್ ಪಿಆರ್ ಜಾರಿಗೆ ಅವಕಾಶ ನೀಡದಿರಿ: ನಿತೀಶ್ ಕುಮಾರ್ ಗೆ ಜೆಡಿಯು ನಾಯಕ ಒತ್ತಾಯ

Update: 2020-01-05 18:31 GMT

ಪಾಟ್ನ, ಜ.5: ಬಿಹಾರದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಪ್ರಕ್ರಿಯೆಯನ್ನು ಬೆಂಬಲಿಸುವ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಆಡಳಿತಾರೂಢ ಜೆಡಿಯು ಪಕ್ಷದ ಹಿರಿಯ ಮುಖಂಡ ಪವನ್ ವರ್ಮ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಎನ್‌ಪಿಆರ್ ಪ್ರಕ್ರಿಯೆಗೆ ಮೇ ತಿಂಗಳಿನಲ್ಲಿ ಚಾಲನೆ ದೊರಕಲಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಶನಿವಾರ ಘೋಷಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪವನ್ ವರ್ಮ, ಎನ್‌ಆರ್‌ಸಿ ಮತ್ತು ಪೌರತ್ವ ಕಾಯ್ದೆ ಗಳು ಹಿಂದು ಮತ್ತು ಮುಸ್ಲಿಮರನ್ನು ಧಾರ್ಮಿಕವಾಗಿ ವಿಭಜಿಸುವ ನೇರ ಪ್ರಯತ್ನವಾಗಿದೆ ಎಂದಿದ್ದಾರೆ.

ನೀವು ಯಾವತ್ತೂ ಜಾತ್ಯಾತೀತ ಭಾರತದ ಆಶಯವನ್ನು ಬೆಂಬಲಿಸಿದವರು. ಆದ್ದರಿಂದ ವಿಭಜನಾತ್ಮಕ ಮತು ತಾರತಮ್ಯ ಧೋರಣೆಯ ಪೌರತ್ವ ಕಾಯ್ದೆಯನ್ನು ಬೆಂಬಲಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಒತ್ತಾಯಿಸಿದ್ದಾರೆ.

 ಬಿಹಾರದಲ್ಲಿ ಮೇ 15ರಿಂದ 28ರವರೆಗೆ ಎನ್‌ಪಿಆರ್ ಪ್ರಕ್ರಿಯೆ ನಡೆಯಲಿದೆ ಎಂಬ ಸುಶೀಲ್ ಮೋದಿ ಹೇಳಿಕೆಯನ್ನು ಉಲ್ಲೇಖಿಸಿದ ವರ್ಮ, ಇಂತಹ ಹೇಳಿಕೆಗಳು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಎಡೆ ಮಾಡುತ್ತವೆ. ಆದ್ದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಎನ್‌ಆರ್‌ಸಿ, ಎನ್‌ಪಿಆರ್ ಮತ್ತು ಪೌರತ್ವ ಕಾಯ್ದೆಯ ವಿಷಯದಲ್ಲಿ ಪಕ್ಷದ ಸ್ಪಷ್ಟ ನಿಲುವನ್ನು ಪ್ರಕಟಿಸಿ, ದೇಶವನ್ನು ವಿಭಜಿಸುವ ಅಕ್ರಮ ಕಾರ್ಯಸೂಚಿಯನ್ನು ವಿರೋಧಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News