ರಾಹುಲ್, ಪ್ರಿಯಾಂಕಾ ಜನರ ದಾರಿ ತಪ್ಪಿಸುತ್ತಿದ್ದಾರೆ: ಅಮಿತ್ ಶಾ

Update: 2020-01-05 15:52 GMT

ಹೊಸದಿಲ್ಲಿ, ಜ. 5: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಕಾಂಗ್ರೆಸ್‌ನ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಹಾಗೂ ಗಲಭೆಗೆ ಉತ್ತೇಜನ ನೀಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಶಾ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರೊಬ್ಬರೂ ತಮ್ಮ ಪೌರತ್ವ ಕಳೆದುಕೊಳ್ಳುವುದಿಲ್ಲ. ನೆರೆಯ ಮೂರು ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಪೌರತ್ವ ನೀಡುವ ಕುರಿತ ಕಾಯ್ದೆ ಇದು ಎಂದರು.

ಯಾರೊಬ್ಬರ ಪೌರತ್ವ ಕಸಿದುಕೊಳ್ಳುವ ನಿಯಮವನ್ನು ಪೌರತ್ವ ತಿದ್ದುಪಡಿ ಕಾಯ್ದೆ ಹೊಂದಿರದೇ ಇರುವುದರಿಂದ ಯಾರು ಕೂಡ ಪೌರತ್ವ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಜನರಲ್ಲಿ ಹೇಳಲು ಬಯಸುತ್ತೇನೆ ಎಂದು ಶಾ ಹೇಳಿದರು.

ಅನಂತರ ತನ್ನ ಮಾತಿನ ಬಂದೂಕನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರತ್ತ ತಿರುಗಿಸಿದ ಶಾ, ಕೇಜ್ರಿವಾಲ್ ಅವರು ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದರು ಎಂದು ಹೇಳಿದರು.

‘‘ದಿಲ್ಲಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ’’ ಎಂದು ಅಮಿತ್ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News