×
Ad

ನೋಟು ನಿಷೇಧದ ಬಳಿಕ ವಾಯುಪಡೆ 625 ಟನ್ ಹೊಸನೋಟುಗಳನ್ನು ಸಾಗಿಸಿತ್ತು: ಬಿ.ಎಸ್.ಧನೋವಾ

Update: 2020-01-05 22:50 IST

ಮುಂಬೈ, ಜ.5: ನೋಟು ನಿಷೇಧದ ಬಳಿಕ ಭಾರತೀಯ ವಾಯುಪಡೆ (ಐಎಎಫ್)ಯು 625 ಟನ್ ತೂಕದ ಹೊಸ ಕರೆನ್ಸಿ ನೋಟುಗಳನ್ನು ಸಾಗಿಸಲು ನೆರವಾಗಿತ್ತು ಎಂದು ಐಎಎಫ್ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ ಅವರು ರವಿವಾರ ಇಲ್ಲಿ ತಿಳಿಸಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನೋವಾ, 625 ಟನ್ ತೂಕದ ಹೊಸನೋಟುಗಳನ್ನು ಸಾಗಿಸಲು ಐಎಎಫ್ ವಿಮಾನಗಳು 33 ಹಾರಾಟಗಳನ್ನು ನಡೆಸಿದ್ದವು. ಒಂದು ಕೋಟಿ ರೂ.ಗಳ ನೋಟುಗಳು 20 ಕೆ.ಜಿ.ಯ ಬ್ಯಾಗ್‌ನಲ್ಲಿ ಹಿಡಿಯುತ್ತವೆ ಎಂದಾದರೆ ನಾವೆಷ್ಟು ಕೋಟಿ ರೂ.ಗಳ ನೋಟುಗಳನ್ನು ಸಾಗಿಸಿದ್ದೆವು ಎನ್ನುವುದನ್ನು ಲೆಕ್ಕ ಹಾಕಿ ಎಂದರು.

ಅವರು 2016, ಡಿ.31ರಿಂದ 2019, ಸೆ.30ರವರೆಗೆ ವಾಯುಪಡೆಯ ಮುಖ್ಯಸ್ಥರಾಗಿದ್ದರು.

ರಫೇಲ್ ಮತ್ತು ಬೊಫೋರ್ಸ್ ಒಪ್ಪಂದಗಳಂತಹ ವಿವಾದಗಳು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಕುಂದಿಸಿವೆ ಎಂದ ಅವರು,ಬೊಫೋರ್ಸ್ ಫಿರಂಗಿಗಳು ಉತ್ತಮವಾಗಿದ್ದವು ಎಂದರು.

ಕಳೆದ ವರ್ಷದ ಫೆಬ್ರುವರಿಯಲ್ಲಿ ಬಾಲಕೋಟ್ ವಾಯು ದಾಳಿಗಳ ಬಳಿಕ ಭಾರತ-ಪಾಕಿಸ್ತಾನ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದಾಗ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಮಿಗ್-21ರ ಬದಲು ರಫೇಲ್ ಯುದ್ಧವಿಮಾನದಲ್ಲಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದು ಧನೋವಾ ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News