ಇಂಟರ್‌ನೆಟ್ ಸಂಪರ್ಕ ಆಡಳಿತಾತ್ಮಕ ಉದ್ದೇಶಕ್ಕೆ ಮಾತ್ರ ಲಭ್ಯ: ಕಾಶ್ಮೀರದ ವೈದ್ಯರ ಹೇಳಿಕೆ
ಶ್ರೀನಗರ, ಜ.5: ಐದು ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಯರ್‌ಲೈನ್ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ರಾಜ್ಯದ 80 ಸರಕಾರಿ ಆಸ್ಪತ್ರೆಗಳಲ್ಲಿ ಇಂಟರ್‌ನೆಟ್ ಸಂಪರ್ಕ ಸ್ಥಾಪಿಸಲಾಗಿದೆ. ಆದರೆ ಕೇವಲ ಆಡಳಿತಾತ್ಮಕ ಉದ್ದೇಶಕ್ಕೆ ಮಾತ್ರ ಇಂಟರ್‌ನೆಟ್ ಸಂಪರ್ಕ ಲಭ್ಯವಾಗಿದೆ ಎಂದು ಕಾಶ್ಮೀರದ ಅತ್ಯಂತ ದೊಡ್ಡ ಮಕ್ಕಳ ಆಸ್ಪತ್ರೆ ಜಿಬಿ ಪಂತ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ವೈದ್ಯಕೀಯ ಸಂಶೋಧನೆ ಮತ್ತು ಇತರ ಶೈಕ್ಷಣಿಕ ಉದ್ದೇಶಕ್ಕೆ ಇಂಟರ್‌ನೆಟ್ ವ್ಯವಸ್ಥೆ ಒದಗಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇಂಟರ್‌ನೆಟ್ ವ್ಯವಸ್ಥೆಯ ಸೀಮಿತ ಪುನಸ್ಥಾಪನೆ ಬಡಜನತೆಗೆ ನೆರವಾಗಲಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಆನ್‌ಲೈನ್ ಗೋಲ್ಡನ್ ಕಾರ್ಡ್ ಬಳಸಿ ಉಚಿತ ವೈದ್ಯಕೀಯ ನೆರವು ಪಡೆಯುವ ಸೌಲಭ್ಯ ಹಲವು ತಿಂಗಳಿಂದ ಅಲಭ್ಯವಾಗಿತ್ತು. ಇಂಟರ್‌ನೆಟ್ ಸ್ಥಗಿತದಿಂದ ಹಲವು ರೋಗಿಗಳಿಗೆ ಸರಕಾರದ ಯೋಜನೆಯ ಸೌಲಭ್ಯ ಪಡೆಯಲು ಅಸಾಧ್ಯವಾಗಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 5ರಂದು ಇಂಟರ್‌ನೆಟ್ ಸ್ಥಗಿತವಾಗಿದ್ದು, ಮುಂದಿನ 25 ದಿನ ಆನ್‌ಲೈನ್ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯ ಪ್ರಕರಣಗಳ ಪ್ರಕ್ರಿಯೆ ಸಾಧ್ಯವಾಗಿರಲಿಲ್ಲ. 25 ದಿನಗಳ ಬಳಿಕ ಆಫ್‌ಲೈನ್ ಮೂಲಕ ಈ ಕಾರ್ಯ ನಡೆಸಿದ್ದೇವೆ. ಅಲ್ಲದೆ ಇಂಟರ್‌ನೆಟ್ ಸೌಲಭ್ಯ ಹೊಂದಿದ್ದ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಆನ್‌ಲೈನ್ ಪ್ರಕ್ರಿಯೆ ನಡೆಸಿದ್ದೇವೆ ಎಂದು ಜಿಬಿ ಪಂತ್ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ ಮುಝಫರ್ ಹೇಳಿದ್ದಾರೆ.
ಆಸ್ಪತ್ರೆಯ ದಾಖಲೆಗಳ ಪ್ರಕಾರ ಪ್ರತೀ ತಿಂಗಳೂ ಆಯುಷ್ಮಾನ್ ಭಾರತ್ ಯೋಜನೆಯಡಿ 20ಕ್ಕೂ ಹೆಚ್ಚು ಬಡಜನರು ಉಚಿತ ವೈದ್ಯಕೀಯ ಸೌಲಭ್ಯ ಪಡೆಯುತ್ತಾರೆ. ಆದರೆ ಆಗಸ್ಟ್ 1ರಿಂದ ಅಕ್ಟೋಬರ್ 18ರ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಒಂದೇ ಒಂದು ಆಯುಷ್ಮಾನ್ ಭಾರತ್ ಯೋಜನೆಯ ಪ್ರಕರಣ ದಾಖಲಾಗಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸುದೀರ್ಘಾವಧಿಯಲ್ಲಿ ಇಂಟರ್‌ನೆಟ್ ವ್ಯವಸ್ಥೆ ಸ್ಥಗಿತಗೊಂಡ ಕಾರಣ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಕಾರ್ಡ್‌ಗಳನ್ನು ಸ್ವೀಕರಿಸಲು ನಿರಾಕರಿಸಲಾಗಿದೆ ಎಂದು ಹಲವರು ದೂರಿದ್ದಾರೆ.
ರಾಜ್ಯದಲ್ಲಿ ಇಂಟರ್‌ನೆಟ್ ಬಳಕೆಯನ್ನು ಆಡಳಿತಾತ್ಮಕ ಉದ್ದೇಶಕ್ಕೆ ಮಾತ್ರ ಸೀಮಿತಗೊಳಿಸಿರುವುದಕ್ಕೆ ವಿದ್ಯಾರ್ಥಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕ್ಷಣ ಮಾತ್ರದಲ್ಲಿ ಸಿದ್ಧಪಡಿಸುತ್ತಿದ್ದ ಸಂಶೋಧನಾ ಲೇಖನಗಳನ್ನು ಸಿದ್ಧಪಡಿಸಲು ಈಗ ಮೂರು ತಿಂಗಳಿಗೂ ಹೆಚ್ಚಿನ ಸಮಯ ಬೇಕಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ವೈದ್ಯಕೀಯ ಸಂಶೋಧನೆ, ಶೈಕ್ಷಣಿಕ ಉದ್ದೇಶಕ್ಕೆ ತನಗೆ ಇಂಟರ್‌ನೆಟ್ ಅತೀ ಅಗತ್ಯವಾಗಿದೆ. ಆದರೆ ಸುದೀರ್ಘಾವಧಿ ಇಂಟರ್‌ನೆಟ್ ಸ್ಥಗಿತದಿಂದ ತನಗೆ ಬಹಳ ಸಮಸ್ಯೆಯಾಗಿದೆ. ಆದ್ದರಿಂದ ಕೆಲವು ಅಗತ್ಯದ ಸ್ಥಳಗಳಿಗೂ ಇಂಟರ್‌ನೆಟ್ ವ್ಯವಸ್ಥೆ ಮರು ಸ್ಥಾಪಿಸಬೇಕು ಎಂದು ಜಿಬಿ ಪಂತ್ ಆಸ್ಪತ್ರೆಯ ವೈದ್ಯ ಡಾ ಸಂಜೀವ್ ಸಿಂಗ್ ಸರಕಾರವನ್ನು ಒತ್ತಾಯಿಸಿದ್ದಾರೆ.