ಸಾಹಿತ್ಯ ಸಮ್ಮೇಳನ ಕೆ ಬಿಡುವ ಒತ್ತಾಯ: ಪ್ರಜಾಪ್ರಭುತ್ವ ವಿರೋಧಿ ನಿಲುವು

Update: 2020-01-05 18:18 GMT

ಮಾನ್ಯರೇ,

ಇದೇ ಜನವರಿ 10ಮತ್ತು 11ರಂದು ಶೃಂಗೇರಿಯಲ್ಲಿ ಹತ್ತನೇ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಜನಪರ ಹೋರಾಟಗಾರ ಮತ್ತು ಸಾಹಿತಿ ಕಲ್ಕುಳಿ ವಿಠಲ ಹೆಗಡೆಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ.

ಹೆಗಡೆಯವರ ಆಯ್ಕೆಯೀಗ ಜಿಲ್ಲೆಯಲ್ಲಿ ವಿವಾದದ ಕಿಡಿಯನ್ನು ಹೊತ್ತಿಸಿದೆ. ಅವರ ಆಯ್ಕೆಯಾದಾಗ ಆರಂಭದಲ್ಲಿ ಕೇಳಿ ಬಂದಿದ್ದು ಪರಿಷತ್ತಿನ ಒಂದು ಗುಂಪು ಯಾರನ್ನೂ ಕೇಳದೆ ಏಕಮುಖಿಯಾಗಿ ತೀರ್ಮಾನ ತೆಗೆದುಕೊಂಡಿದೆಯೆಂಬುದಾಗಿತ್ತು. ಮತ್ತು ಈಬಗ್ಗೆ ಒಂದಷ್ಟು ವಾದ ಪ್ರತಿವಾದಗಳು ನಡೆದವು. ಮೊದಲಿನಿಂದಲೂ ಹೆಗಡೆಯವರ ಜನಪರ ಹೋರಾಟಗಳನ್ನು ವಿರೋಧಿಸುತ್ತ ಅಸಹನೆ ತೋರಿಸುತ್ತ ಬಂದಿದ್ದ ಬಲಪಂಥೀಯ ವಿಚಾರಧಾರೆಯ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಅಖಾಡಕ್ಕಿಳಿದು ಹೆಗಡೆಯವರ ಅಧ್ಯಕ್ಷತೆಯನ್ನು ವಿರೋಧಿಸಿ ಹೇಳಿಕೆ ನೀಡ ತೊಡಗಿದವು.

ಇದೀಗ ಈ ವಿರೋಧ ಸಂಘಟನಾತ್ಮಕ ರೂಪ ಪಡೆದುಕೊಂಡು ಬಿಜೆಪಿ, ಬಜರಂಗದಳ, ಎಬಿವಿಪಿಗಳು ‘ಕಸಾಪ ಉಳಿಸಿ’ ಹಾಗು ‘ನಕ್ಸಲ್ ವಿರೋಧಿ ಹೋರಾಟ ಸಮಿತಿ’ ಎಂಬ ಬ್ಯಾನರಿನ ಅಡಿಯಲ್ಲಿ ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಸಮಾವೇಶ ನಡೆಸಿವೆ. ಜಿಲ್ಲೆಯ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಮತ್ತು ಪರಿಷತ್ತಿನ ಒಳರಾಜಕಾರಣಗಳಿಂದ ಇದುವರೆಗೂ ಹೆಗಡೆಯವರ ಕೈತಪ್ಪುತ್ತಿದ್ದ ಅಧ್ಯಕ್ಷತೆಯ ಮನ್ನಣೆ ಈ ಬಾರಿ ಅವರಿಗೆ ದೊರಕಿದ್ದರಲ್ಲಿ ಅಚ್ಚರಿ ಪಡುವಂತಹುದೇನೂ ಇರಲಿಲ್ಲ. ಯಾಕೆಂದರೆ ಈಗ ಜಿಲ್ಲೆಯಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರ ಆಯ್ಕೆ ಅವರ ಅರ್ಹತೆಗೆ ಸಂದದ್ದಾಗಿತ್ತು. ಅಕಾಡಮಿ ಪ್ರಶಸ್ತಿ ಮಾತ್ರವಲ್ಲದೆ ಚದುರಂಗ ಪ್ರಶಸ್ತಿ ಸಹ ಹೆಗಡೆಯವರಿಗೆ ದೊರಕಿದೆ. ಇಷ್ಟೆಲ್ಲ ಅರ್ಹತೆಗಳ ನಡುವೆಯೂ ಯಾಕೆ ಹೆಗಡೆಯವರ್ನು ವಿರೋಧಿಸಲಾಗುತ್ತಿದೆ ಎನ್ನುವುದನ್ನು ನೋಡಿದರೆ ಚಿಕ್ಕಮಗಳೂರು ಜಿಲ್ಲೆಯನ್ನು ಕಾಡುತ್ತಿರುವ ಮೂಲಭೂತವಾದ ಶಕ್ತಿಗಳ ವಿರಾಟ್ ಸ್ವರೂಪ ಪರಿಚಯವಾಗುತ್ತದೆ.
  ಮೊದಲಿನಿಂದಲೂ ಹೆಗಡೆಯವರು ದಲಿತರ, ಬಡವರ, ಆದಿವಾಸಿಗಳ ಪರ ಹೋರಾಟ ಮಾಡಿಕೊಂಡೆ ಬದವರು. ಈ ಹೋರಾಟಗಳ ಕಾರಣದಿಂದ ಅವರಿಗೆ ಲಭ್ಯವಾಗುತ್ತಿದ್ದ ಜನಪ್ರಿಯತೆಯನ್ನು ಸಹಿಸದ ಮೇಲ್ವರ್ಗಗಳ ಭೂಮಾಲಕರು, ಬಂಡವಾಳಶಾಹಿ, ಕೋಮುವಾದಿ ಶಕ್ತಿಗಳು ಹಿಂದಿನಿಂದಲೂ ಹೆಗಡೆಯವರ ವಿರುದ್ದ ಕಿಡಿಕಾರುತ್ತಲೇ ಬಂದಿದ್ದಾರೆ. ಈ ಹಿಂದೆ ಇವರ ವಿರುದ್ದ ಅಟ್ರಾಸಿಟಿ ಸೇರಿದಂತೆ ಹತ್ತಾರು ಸುಳ್ಳು ಕೇಸುಗಳನ್ನು ಹಾಕಿಸಿ, ನಕ್ಸಲ್ ಎಂಬ ಹಣೆಪಟ್ಟಿಯನ್ನೂ ಕಟ್ಟಿ ಹೆಗಡೆಯವರನ್ನು ಹಣಿಯಲು ಯತ್ನಿಸುತ್ತಲೇ ಬಂದಿದ್ದಾರೆ.

ಹೆಗಡೆಯವರ ಆಯ್ಕೆಯನ್ನು ವಿರೋಧಿಸುವ ಮತ್ತು ಅವರ ಸಿದ್ಧಾಂತಗಳನ್ನು ಧಿಕ್ಕರಿಸಿ ಪ್ರತಿಭಟಿಸುವ ಎಲ್ಲ ಹಕ್ಕುಗಳು ಜನರಿಗೆ ಮತ್ತು ಸಂಘಟನೆಗಳಿಗೆ ಇವೆ. ಆದರೆ ಸಮಾವೇಶ ನಡೆಸಿ ಸಮ್ಮೇಳನ ನಡೆದರೆ ಉಗ್ರವಿರೋಧವನ್ನು ಎದುರಿಸಬೇಕಾಗುತ್ತದೆ, ಸಮ್ಮೇಳನ ರದ್ದು ಪಡಿಸಿ ಎಂದು ಪರೋಕ್ಷವಾಗಿ ಬೆದರಿಕೆ ಹಾಕುವ ಮೂಲಕ ಕೆಲವು ಸಂಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಅಣಕಿಸಲು ಹೊರಟು ನಿಂತಿವೆ.

ಇಂತಹ ಸಂದರ್ಭದಲ್ಲಿ ನಾಡಿನಸಾಹಿತಿಗಳು, ಪ್ರಗತಿಪರ ಚಿಂತಕರು ಕಲ್ಕುಳಿಯವರ ಪರ ಅಂದರೆ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲಬೇಕಾಗಿದೆ.

Similar News