ಮೋದಿ ಸೃಷ್ಟಿಸಿದ ನಿರುದ್ಯೋಗ ಭಾರತ!

Update: 2020-01-06 06:26 GMT

ಎನ್‌ಆರ್‌ಸಿ, ಸಿಎಎ ಮೂಲಕ ಈ ದೇಶದ ಜನರ ಬದುಕಿನ ಅಸ್ತಿತ್ವವನ್ನೇ ಸರಕಾರ ಪ್ರಶ್ನಿಸುವ ಮೂಲಕ ಇಡೀ ದೇಶ ಅನಿವಾರ್ಯವಾಗಿ ಅದರ ವಿರುದ್ಧ ಹೋರಾಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿತು. ಒಂದು ವೇಳೆ ಈ ಕಾಯ್ದೆ ಜಾರಿಗೆ ತರದೇ ಇದ್ದಿದ್ದರೆ, ಇದೇ ಯುವಕರ ದಂಡು ಹೆಚ್ಚುತ್ತಿರುವ ನಿರುದ್ಯೋಗ , ಬೆಲೆಯೇರಿಕೆಯ ವಿರುದ್ಧ ಬೀದಿಗಿಳಿದು ಸರಕಾರವನ್ನು ಬಟಾಬಯಲು ಮಾಡುತ್ತಿತ್ತು. ಸಿಎಎ ಕಾಯ್ದೆ ಜಾರಿಗೆ ತರುವ ಮೂಲಕ ಈ ದೇಶವನ್ನು ಮುಸ್ಲಿಮರು ಮತ್ತು ಮುಸ್ಲಿಮೇತರರು ಎಂದು ಒಡೆಯಲು ಸಂಚು ಹೂಡಿತು. ಆದರೆ ಅದು ವಿಫಲವಾಗಿ ದೇಶದ ಜನರು ಜಾತಿ, ಧರ್ಮ ಮರೆತು ಒಂದಾಗಿ ಹೋರಾಟಕ್ಕಿಳಿದಿದ್ದಾರೆ. ಆದರೆ ಭಾಗಶಃ ಬಿಜೆಪಿ ಗೆದ್ದಿದೆ. ಇಂದು ಅಭಿವೃದ್ಧಿಯಲ್ಲಿ ಸರಕಾರದ ವೈಫಲ್ಯ ಮುಖಪುಟದ ಸುದ್ದಿ ಆಗುತ್ತಿಲ್ಲ. ಆದರೆ ದೇಶದೊಳಗೆ ಎದ್ದಿರುವ ಅರಾಜಕತೆಯೂ ಮೋದಿ ಸರಕಾರದ ವೈಫಲ್ಯವೇ ಆಗಿದೆ ಎನ್ನುವುದನ್ನು ಇಡೀ ವಿಶ್ವ ಗಮನಿಸುತ್ತಿದೆ. ಸಿಎಎ, ಎನ್‌ಆರ್‌ಸಿ ಪ್ರತಿಭಟನೆಗಳ ಜೊತೆಗೆ ಈ ದೇಶದ ನಿರುದ್ಯೋಗದ ಕುರಿತ ಪ್ರತಿಭಟನೆಯೂ ಕೈ ಜೋಡಿಸಬೇಕಾಗಿದೆ. ಎಲ್ಲ ಪ್ರತಿಭಟನೆಗಳೂ ನದಿಯಾಗಿ ಹರಿದು ಪೌರತ್ವ ಪ್ರತಿಭಟನೆಯ ಜೊತೆಗೆ ಸೇರಿಕೊಂಡು ಸಾಗರವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹೇಗೆ ಯುವಕರಿಗೆ ವಂಚಿಸಿದೆ ಎನ್ನುವುದೂ ಬಯಲಿಗೆ ಬರಬೇಕಾಗಿದೆ. ಇಂದು ಬಹುತೇಕ ಯುವಕರು ಸೇರಿದಂತೆ ದೇಶದಲ್ಲಿ ಪ್ರಸಕ್ತ 7.3 ಕೋಟಿಗೂ ಅಧಿಕ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಬಹುಶಃ ಇಷ್ಟೊಂದು ದೊಡ್ಡ ಸಂಖ್ಯೆಯ ನಿರುದ್ಯೋಗಿಗಳನ್ನು ಭಾರತವು ಈತನಕ ಕಂಡಿರಲಿಲ್ಲ. ನಗರ ಪ್ರದೇಶಗಳಲ್ಲಿ ನಿರುದ್ಯೋಗವು ಶೇ.8.9ಕ್ಕಿಂತಲೂ ಹೆಚ್ಚಿದ್ದು, ನಗರಕೇಂದ್ರಗಳು ಉದ್ಯೋಗ ಬೆಳವಣಿಗೆಯ ಕೇಂದ್ರಗಳೆಂಬ ನಂಬಿಕೆಯನ್ನು ಹುಸಿಗೊಳಿಸಿದೆ. ಕಳೆದ ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ಶೇ.6ರಿಂದ 8ರಷ್ಟಿತ್ತು. ಇದೊಂದು ಹತೋಟಿ ತಪ್ಪಿದ ಬಿಕ್ಕಟ್ಟಾಗಿ ಬಿಜೆಪಿ ಸರಕಾರಕ್ಕೆ ಪರಿಣಮಿಸಿದೆ.

ದೇಶಾದ್ಯಂತ ನಿರುದ್ಯೋಗದ ಪಿಡುಗು ತಾಂಡವವಾಡುತ್ತಿರುವಂತೆಯೇ, ಜನವರಿ 8ರಂದು 10 ಕಾರ್ಮಿಕ ಒಕ್ಕೂಟಗಳು ಹಾಗೂ ಹಲವಾರು ಸಂಘಟನೆಗಳು ಭಾರತದಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಕೇಂದ್ರ ಸರಕಾರವು ಉದ್ಯೋಗಗಳನ್ನು ಸೃಷ್ಟಿಸಬೇಕೆಂಬುದು ಈ ಕಾರ್ಮಿಕ ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ. ವಿಶೇಷವೆಂದರೆ, ಅಖಿಲ ಭಾರತ ಕಿಸಾನ್ ಸಂಘರ್ಷ್ ಸಮನ್ವಯ ಸಮಿತಿಗೆ ನಿಷ್ಠವಾಗಿರುವ 100ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ಜನವರಿ 8ರ ಮುಷ್ಕರವನ್ನು ಬೆಂಬಲಿಸಿವೆ ಹಾಗೂ ಆ ದಿನವೇ ಗ್ರಾಮೀಣ ಬಂದ್‌ಗೆ ಕರೆ ನೀಡಿವೆ.

ದೇಶವನ್ನು ತಲ್ಲಣಗೊಳಿಸಿರುವ ನಿರುದ್ಯೋಗದ ಸಮಸ್ಯೆಗೆ ಮೋದಿ ಸರಕಾರದ ದೂರದೃಷ್ಟಿರಹಿತ ನೀತಿಗಳೇ ಕಾರಣವೆಂಬುದರಲ್ಲಿ ಎಳ್ಳಷ್ಟು ಸಂದೇಹವಿಲ್ಲ. ಜನಸಾಮಾನ್ಯರ ಖರೀದಿ ಶಕ್ತಿಯನ್ನು ಉತ್ತೇಜಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬದಲು ಕಾರ್ಪೊರೇಟ್ ವಲಯಕ್ಕೆ ರಿಯಾಯಿತಿಗಳನ್ನು ನೀಡುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಪೋಷಿಸಿದಲ್ಲಿ, ಹೂಡಿಕೆಗೆ ಉತ್ತೇಜನ ದೊರೆತಂತಾಗುತ್ತದೆ. ಆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಇದರಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದೇ ಮೋದಿ ಸರಕಾರದ ತರ್ಕವಾಗಿದೆ. ಆದರೆ ಯುರೋಪ್ ಹಾಗೂ ಲ್ಯಾಟಿನ್ ರಾಷ್ಟ್ರಗಳು ಈ ಹಿಂದೆಯೇ ಇಂತಹ ಕಾರ್ಯತಂತ್ರಗಳನ್ನು ಅನುಸರಿಸಿದ್ದವಾದರೂ, ಅದರಿಂದ ವಿನಾಶಕಾರಿ ಪರಿಣಾಮಗಳೇ ಉಂಟಾದವು. ಆ ದೇಶಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಲಾಭದ ಗಳಿಕೆ ಹೆಚ್ಚಿತಾದರೂ, ದುಡಿಯುವ ಜನರ ಆದಾಯ ಕುಸಿಯಿತು, ನಿರುದ್ಯೋಗ ಉಲ್ಬಣಿಸಿತು ಹಾಗೂ ಮುಷ್ಕರ, ಪ್ರತಿಭಟನೆಗಳು ವ್ಯಾಪಕವಾದವು.

 ಕಾರ್ಪೊರೇಟ್ ಸಂಸ್ಥೆಗಳಿಗೆ ಬಿಟ್ಟಿ ಸೌಲಭ್ಯಗಳನ್ನು ನೀಡುವಲ್ಲಿ ಮೋದಿ ಸರಕಾರವು ದಾಖಲೆಯನ್ನೇ ಸಷ್ಟಿಸಿದೆ. 2018ರಲ್ಲಿ ಘೋಷಿಸಿದ್ದಕ್ಕಿಂತ ಶೇ.33ರಷ್ಟು ಅಧಿಕ ರಿಯಾಯಿತಿಗಳನ್ನು 2019ರಲ್ಲಿ ಕೇವಲ ಮೂರು ತಿಂಗಳುಗಳ ಅವಧಿಯಲ್ಲಿ ಅದು ಪ್ರಕಟಿಸಿದೆ. 2014ರಿಂದೀಚೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದ ಐದೂವರೆ ವರ್ಷಗಳ ಅವಧಿಯಲ್ಲಿ ಕಾರ್ಪೊರೇಟ್ ವಲಯಕ್ಕೆ 5.74 ಲಕ್ಷ ಕೋಟಿ ರೂ. ವೌಲ್ಯದ ಬಿಟ್ಟಿ ಸೌಲಭ್ಯಗಳನ್ನು ಘೋಷಿಸಿದೆ.

ಪ್ರತಿ ವರ್ಷವೂ ಒಂದು ಕೋಟಿ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಿಕೊಡುವುದಾಗಿ ಇದೇ ನರೇಂದ್ರ ಮೋದಿಯವರು ಭರವಸೆ ನೀಡಿದ್ದನ್ನು ದೇಶದ ಜನತೆ ಇಂದಿಗೂ ಮರೆತಿಲ್ಲ. ಜನತೆಗೆ ‘ಅಚ್ಚೇ ದಿನ್’ ( ಒಳ್ಳೆಯ ದಿನಗಳು) ಭರವಸೆಯನ್ನು ಕೂಡಾ ಅವರು ನೀಡಿದ್ದರು. ಆದರೆ ಈ ಭರವಸೆಗಳ ಗಾಳಿಗೋಪುರವು ಈಗ ಕುಸಿದುಬಿದ್ದಿದೆ. ಉದ್ಯೋಗಗಳಿಂದ ವಂಚಿತರಾದವರ ಕುಟುಂಬಗಳ ದುಸ್ಥಿತಿ ಒಂದೆಡೆ ನಾವೀಗ ಕಾಣುತ್ತಿದ್ದೇವಾದರೆ, ಈಗ ಇರುವ ಉದ್ಯೋಗಗಳ ವೇತನಗಳು ಅತ್ಯಂತ ನಿರಾಶದಾಯಕವಾಗಿವೆ. ಉದ್ಯೋಗ ಪಡೆಯುವ ಹಪಾಹಪಿಯಲ್ಲಿ ನೂರಾರು ನಿರುದ್ಯೋಗಿ ಯುವಜನರು ಫ್ಯಾಕ್ಟರಿಗಳ ಗೇಟುಗಳ ಮುಂದೆ ಕಾದುನಿಲ್ಲುತ್ತಿದ್ದರೆ, ಫ್ಯಾಕ್ಟರಿಯ ಒಳಗೆ ದುಡಿಯುತ್ತಿರುವವರು ವೇತನ ಅಥವಾ ಉತ್ತಮ ಸವಲತ್ತುಗಳಿಗಾಗಿ ಧ್ವನಿಯೆತ್ತುವಂತಿಲ್ಲ. ಯಾಕೆಂದರೆ ಅವರನ್ನು ಆಡಳಿತವರ್ಗವು ಯಾವುದೇ ಕ್ಷಣದಲ್ಲಿ ವಜಾಗೊಳಿಸಬಹುದಾಗಿದೆ ಹಾಗೂ ಕಡಿಮೆ ವೇತನದಲ್ಲಿ ಹೊಸ ನೌಕರರನ್ನು ನೇಮಿಸಿಕೊಳ್ಳಬಹುದಾಗಿದೆ. ಪ್ರಸಕ್ತ ಆರ್ಥಿಕ ಹಿಂಜರಿತದಿಂದಾಗಿ ದೇಶಾದ್ಯಂತ ಕೈಗಾರಿಕಾ ವಲಯಗಳಲ್ಲಿ ಈ ಪ್ರವೃತ್ತಿ ಕಂಡುಬರುತ್ತಿದೆ.

ಈ ದೇಶವನ್ನು ಸರ್ವರೀತಿಯಲ್ಲಿ ನಾಶ ಮಾಡಲು ಪ್ರಯತ್ನಿಸಲು ಪಾಕಿಸ್ತಾನ ಯತ್ನಿಸುತ್ತಾ ಬಂದಿದೆ. ಆದರೆ ವಿಫಲವಾಗಿದೆ. ಈ ದೇಶದ ಪ್ರಜಾಸತ್ತೆ, ಆರ್ಥಿಕತೆ, ಸಂವಿಧಾನದ ಹಿರಿಮೆಯನ್ನು ಇದು ಹೇಳುತ್ತದೆ. ಹಲವು ಜಾತಿ, ಧರ್ಮಗಳ ಆಗರವಾಗಿದ್ದರೂ ದೇಶದ ಆಂತರಿಕ ಭದ್ರತೆಯನ್ನು ದುರ್ಬಲಗೊಳಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ದುರದೃಷ್ಟವಶಾತ್, ಪಾಕಿಸ್ತಾನಕ್ಕೆ 70 ವರ್ಷಗಳಲ್ಲಿ ಸಾಧ್ಯವಾಗದೇ ಇದ್ದುದನ್ನು ಮೋದಿ ಸರಕಾರ 6 ವರ್ಷಗಳಲ್ಲಿ ಮಾಡಿ ತೋರಿಸಿತು. ದೇಶ ಇನ್ನೂ ವೌನವಾಗಿ ಉಳಿದರೆ, ಭಾರತವನ್ನು ಸರ್ವನಾಶ ಮಾಡುವ ಪಾಕಿಸ್ತಾನದ ದುರುದ್ದೇಶ ಮೋದಿಯ ಮೂಲಕವೇ ಈಡೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News