ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ್ ಸೇವಾ ಸಮಿತಿಯಿಂದ ಧರಣಿ

Update: 2020-01-06 09:07 GMT

ಬಂಟ್ವಾಳ, ಜ.6: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ಮಂಗಳವಾರ ಬಿ.ಸಿ.ರೋಡ್ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಧರಣಿ ನಡೆಯಿತು.

ದಲಿತ್ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಧರಣಿಯ ನೇತೃತ್ವ ವಹಿಸಿ ಮಾತನಾಡಿ, ಬಂಟ್ವಾಳ ತಾಲೂಕಿನ ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸಬೇಕು. ಅದಲ್ಲದೆ, ಬಂಟ್ವಾಳ ತಾಲೂಕಿನ ನಿವೃತ್ತ ಸೈನಿಕರಿಗೆ ಅಳತೆಯಾಗಿರುವ ಜಮೀನಿಗೆ ಹಕ್ಕು ಪತ್ರ ನೀಡಬೇಕು. ಅನೇಕ ವರ್ಷಗಳಿಂದ ಸರಕಾರ ಮತ್ತು ಸರಕಾರದ ಸ್ವಾಮ್ಯಕ್ಕೆ ಒಳಪಡುವ ಇಲಾಖೆ ಅಥವಾ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುವ ವರ್ಗವನ್ನು ಖಾಯಂಗೊಳಿಸಬೇಕು. ಇಲ್ಲಿ ಹೆಚ್ಚಿನ ನೌಕರರು ಪ.ಜಾತಿ/ಪ.ಪಂಗಡ ಹಾಗೂ ಬಡವರ್ಗದವರಾಗಿದ್ದು, ಇವರ ಕೆಲಸದ ವಯೋಮಿತಿ ದಾಟಿದೆ. ಆದ್ದರಿಂದ ಈ ನೌಕರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರೊಂದಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ವಿವಿಧ ಬೇಡಿಕೆಗಳು:

ವಿಟ್ಲ ಪಪಂನಲ್ಲಿ ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಿದ ಸ್ಥಳದಲ್ಲಿ ಕೂಡಲೇ ಭವನದ ನಿರ್ಮಾಣ, ಸಮಾನ ಕೆಲಸಕ್ಕೆ ಸಮಾನ ವೇತನ, ಬ್ಯಾಕ್ ಲಾಗ್ ಹುದ್ದೆಗಳ ಜಾರಿ, ಕನಿಷ್ಟ ವೇತನ, ಇಎಸ್‌ಐ, ಪಿಎಫ್ ನೀಡುವುದರ ಜೊತೆಗೆ ಭದ್ರತೆ ಒದಗಿಸುವುದು, ನಿವೃತ್ತಿ ವೇತನ, ಡಿಸಿ ಮನ್ನಾ ಜಮೀನಿಗೆ ಹಕ್ಕು ಪತ್ರ ವಿತರಣೆ, ರುದ್ರ ಭೂಮಿ, ಸಂಪರ್ಕ ರಸ್ತೆ ನಿರ್ಮಾಣ, ದೈವಸ್ಥಾನ, ದೇವಸ್ಥಾನ ಹಾಗೂ ಮಂದಿರಗಳ ಸಕ್ರಮ, ಗ್ರಾಮ ಮಟ್ಟದಲ್ಲಿ ಆಧಾರ್ ತಿದ್ದುಪಡಿ ವ್ಯವಸ್ಥೆ, ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ಪತ್ರಿಕಾ ಮಾಧ್ಯಮದ ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಂಗಳೂರು ತಾಲೂಕು ಅಧ್ಯಕ್ಷ ಶ್ರೀಧರ್, ನಲಿಕೆ ಸಮಾಜದ ಸೇವಾ ಸಮಿತಿಯ ಅಧ್ಯಕ್ಷ ರಮೇಶ್ ಕಡಂಬು, ಬ್ರಹ್ಮಶ್ರೀ ನಾರಾಯಣ ಸ್ವಾಮಿ ಇದರ ಅಧ್ಯಕ್ಷ ಮಾರಪ್ಪ ಸುವರ್ಣ ಕೆದಿಲ, ಮಹಿಳಾ ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮಣ್ಣ ಪಿಲಿಂಜ, ಚಂದ್ರಶೇಖರ, ಜಿಲ್ಲಾ ಉಪಾಧ್ಯಕ್ಷರಾದ ಪ್ರಸಾದ್ ಬೊಳ್ಮಾರ್, ರಾಜು ಹೊಸ್ಮಠ, ಬಂಟ್ವಾಳ ತಾಲೂಕು ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ಮೋಹನ್ ದಾಸ್ ವಿಟ್ಲ, ಗೋಪಾಲ ನೇರಳಕಟ್ಟೆ, ಕುಶಾಲಪ್ಪ, ಸೋಮಪ್ಪ, ಅಣ್ಣಪ್ಪ, ಸುನಂದ ಪುತ್ತೂರು ಹಾಜರಿದ್ದರು.

ಬಳಿಕ ಶಾಸಕ ರಾಜೇಶ್ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಶಾಸಕರು ಬೇಡಿಕೆ ಈಡೇಸುವ ಬಗ್ಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News