×
Ad

ಸಾರ್ವಕಾಲಿಕ ದಾಖಲೆ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ

Update: 2020-01-06 19:35 IST

ಹೊಸದಿಲ್ಲಿ,ಜ.6: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸೋಮವಾರ ಪ್ರತಿ ಹತ್ತು ಗ್ರಾಮ್‌ಗಳಿಗೆ 41,730 ರೂ.ಗೆ ತಲುಪುವುದರೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಹಿಂದಿನ ವಹಿವಾಟಿನ ದಿನ ಪ್ರತಿ ಹತ್ತು ಗ್ರಾಮ್‌ಗಳಿಗೆ 41,010 ರೂ.ಗೆ ಮುಕ್ತಾಯಗೊಂಡಿದ್ದ ಚಿನ್ನದ ಬೆಲೆಗಳು ಸೋಮವಾರ ಒಂದೇ ದಿನದಲ್ಲಿ 720 ರೂ.ಗಳಷ್ಟು ಜಿಗಿದಿದೆ.

ಶೇರು ಮಾರುಕಟ್ಟೆ ಕುಸಿತ,ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಏರಿಕೆ ಮತ್ತು ಪರ್ಶಿಯನ್ ಕೊಲ್ಲಿಯಲ್ಲಿ ಯುದ್ಧದ ಕಾರ್ಮೋಡದಿಂದಾಗಿ ಸುರಕ್ಷಿತ ಹೂಡಿಕೆಯಾಗಿರುವ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಸಾರ್ವಕಾಲಿಕ ದಾಖಲೆ ಸೃಷ್ಟಿಗೆ ಕಾರಣವಾಗಿತ್ತು.

ಬೆಳ್ಳಿ ಕೂಡ ಹಿಂದೆ ಬಿದ್ದಿಲ್ಲ. ಹಿಂದಿನ ವಹಿವಾಟಿನ ದಿನ ಪ್ರತಿ ಕೆ.ಜಿ.ಗೆ 48,325 ರೂ.ಗೆ ಮುಕ್ತಾಯಗೊಂಡಿದ್ದ ಬೆಳ್ಳಿ ಸೋಮವಾರ 1,105 ರೂ.ಗಳಷ್ಟು ಏರಿಕೆಯಾಗಿ 49,430 ರೂ.ಗೆ ತಲುಪಿದೆ.

ಅಮೆರಿಕ ಮತ್ತು ಇರಾನ್ ನಡುವೆ ಯುದ್ಧಭೀತಿಯು ಸುರಕ್ಷಿತ ಹೂಡಿಕೆಯಾಗಿರುವ ಚಿನ್ನಕ್ಕೆ ಬೇಡಿಕೆಯನ್ನು ಹೆಚ್ಚಿಸಿದೆ. ಇದರೊಂದಿಗೆ ಡಾಲರ್ ಎದುರು ಇನ್ನಷ್ಟು ದುರ್ಬಲಗೊಂಡಿರುವ ರೂಪಾಯಿ,ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಗಗನಚುಂಬಿಯಾಗಿರುವುದು ದೇಶಿಯ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಬೆಲೆ ದಾಖಲೆಗೆ ಕಾರಣವಾಗಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟಿಸ್‌ನ ದೇವರ್ಷ ವಕೀಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಔನ್ಸ್‌ಗೆ ಚಿನ್ನ 1,575 ಡಾ.ಮತ್ತು ಬೆಳ್ಳಿ 18.34 ಡಾ.ಗೆ ಮಾರಾಟವಾಗಿವೆ.

ಬೆಳಗಿನ ವಹಿವಾಟಿನಲ್ಲಿ ಡಾಲರ್ ಎದುರು 33 ಪೈಸೆಗಳನ್ನು ಕಳೆದುಕೊಂಡು 72.11ಕ್ಕೆ ಕುಸಿದಿದ್ದ ರೂಪಾಯಿ ಸಂಜೆಯ ವೇಳೆಗೆ 71.93ಕ್ಕೆ ಚೇತರಿಸಿಕೊಂಡಿತ್ತು. ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ ಹೂಡಿಕೆದಾರರನ್ನು ತಲ್ಲಣಗೊಳಿಸಿದ್ದರಿಂದ ಹೂಡಿಕೆದಾರರು ಸೋಮವಾರ ಕೇವಲ ಮೂರು ಗಂಟೆಗಳಲ್ಲಿ ಮೂರು ಲಕ್ಷ ಕೋಟಿ ರೂ.ಸಂಪತ್ತನ್ನು ಕಳೆದುಕೊಂಡಿದ್ದಾರೆ. ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಸುಮಾರು 788 ಅಂಶಗಳಷ್ಟು ಪತನಗೊಂಡು 40,676ಕ್ಕೆ ಮುಕ್ತಾಯಗೊಂಡಿದ್ದರೆ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್‌ಸ್‌ಇ)ದ ಸೂಚ್ಯಂಕ ನಿಫ್ಟಿ ಸುಮಾರು 233 ಅಂಶಗಳಷ್ಟು ಕುಸಿದು 11993ರಲ್ಲಿ ಮುಕ್ತಾಯಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News