×
Ad

ಪ.ಬಂಗಾಳ ಮದ್ರಸ ಸೇವಾ ಆಯೋಗ ಕಾಯ್ದೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2020-01-06 19:50 IST

ಹೊಸದಿಲ್ಲಿ,ಜ.6: ಪಶ್ಚಿಮ ಬಂಗಾಳ ಮದ್ರಸ ಸೇವಾ ಆಯೋಗ ಕಾಯ್ದೆ 2008 ಅನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಎತ್ತಿ ಹಿಡಿದಿದೆ. ಇದರೊಂದಿಗೆ ರಾಜ್ಯದಲ್ಲಿಯ ಮದ್ರಸಗಳಿಗೆ ಶಿಕ್ಷಕರ ನೇಮಕಾತಿಗೆ ಮಾರ್ಗ ಸುಗಮಗೊಂಡಿದೆ. ಕಾಯ್ದೆಯಡಿ ರಚಿತ ಆಯೋಗವು ಮಾಡಿರುವ ಶಿಕ್ಷಕರ ನೇಮಕಾತಿಗಳನ್ನೂ ನ್ಯಾಯಾಲಯವು ಎತ್ತಿಹಿಡಿದಿದೆ.

ಪ.ಬಂಗಾಳ ಮದ್ರಸ ಸೇವಾ ಆಯೋಗ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದ ಕೊಲ್ಕತ್ತಾ ಉಚ್ಚ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಅರುಣ ಮಿಶ್ರಾ ಮತ್ತು ಯು.ಯು.ಲಲಿತ್ ಅವರ ಪೀಠವು,ಮದ್ರಸಾ ವ್ಯವಸ್ಥಾಪನ ಸಮಿತಿಗಳು ಈವರೆಗೆ ಮಾಡಿರುವ ನೇಮಕಗಳು ಸಿಂಧುವಾಗಿವೆ ಎಂದು ಹೇಳಿತು.

ಮದ್ರಸಗಳಲ್ಲಿ ಶಿಕ್ಷಕರ ನೇಮಕಾತಿಯನ್ನು ಆಯೋಗವು ನಿರ್ಧರಿಸಲು ಅವಕಾಶ ಕಲ್ಪಿಸಿರುವ ಪ.ಬಂಗಾಳ ಮದ್ರಸ ಸೇವಾ ಆಯೋಗ ಕಾಯ್ದೆ,2008ರ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯವು ಎತ್ತಿಹಿಡಿದಿದೆ.

ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಅಲ್ಪಸಂಖ್ಯಾತ ಶಿಕ್ಷಣಸಂಸ್ಥೆಗಳಿಗೆ ಅನುದಾನವನ್ನೊದಗಿಸುವ ಸರಕಾರವು ಶಿಕ್ಷಕರ ನೇಮಕಾತಿಗಳಿಗೆ ಮಾರ್ಗಸೂಚಿಗಳನ್ನು ರೂಪಿಸಬಹುದು, ಆದರೆ ತಾನೇ ಅವರನ್ನು ನೇಮಕಗೊಳಿಸುವಂತಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

 ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದ ಕೊಲ್ಕತ್ತಾ ಉಚ್ಚ ನ್ಯಾಯಾಲಯವು ಎಲ್ಲ ಅಲ್ಪಸಂಖ್ಯಾತರಿಗೆ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆಡಳಿತ ನಡೆಸುವ ಹಕ್ಕು ನೀಡಿರುವ ಸಂವಿಧಾನದ 30ನೇ ವಿಧಿಯನ್ನು ಕಾಯ್ದೆಯು ಉಲ್ಲಂಘಿಸಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.

ನೂತನ ಕಾಯ್ದೆಯಡಿ ನೇಮಕಗೊಂಡಿದ್ದ ಶಿಕ್ಷಕರು ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ದಲ್ಲಿ ಪ್ರಶ್ನಿಸಿದ್ದರು.

ಅವರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅಂತಿಮ ಆದೇಶದವರೆಗೆ ಅವರನ್ನು ಹುದ್ದೆಗಳಿಂದ ವಜಾಗೊಳಿಸದಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡುವ ಮೂಲಕ ಮಧ್ಯಂತರ ಪರಿಹಾರವನ್ನು ಒದಗಿಸಿತ್ತು.

2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News