×
Ad

ಪಾನಮತ್ತ ಗೂಂಡಾಗಳು ನನಗೆ ಥಳಿಸಿದರು: ಜೆಎನ್‌ಯುನ ಅಂಧ ವಿದ್ಯಾರ್ಥಿಯ ಅಳಲು

Update: 2020-01-06 22:15 IST

ಹೊಸದಿಲ್ಲಿ,ಜ.6: ರವಿವಾರ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಡೆದ ಹಲ್ಲೆ ಕ್ರೂರ ಮಾತ್ರವಲ್ಲ, ಸಂವೇದನಾಶೂನ್ಯವೂ ಆಗಿತ್ತು. ಮಾರಕಾಸ್ತ್ರಗಳಿಂದ ಸಜ್ಜಾಗಿದ್ದ ಮುಸುಕುಧಾರಿ ಗೂಂಡಾಗಳು ಹಾಸ್ಟೆಲ್‌ನಲ್ಲಿ ವಾಸವಿರುವ ಅಂಧ ಸಂಶೋಧನಾ ವಿದ್ಯಾರ್ಥಿ ಸೂರ್ಯಪ್ರಕಾಶರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಾನು ಅಂಧ ಎಂದು ಪರಿಪರಿಯಾಗಿ ಹೇಳಿಕೊಂಡರೂ ಅದನ್ನು ಲೆಕ್ಕಿಸದೆ ಮೈತುಂಬ ಹೊಡೆತಗಳನ್ನು ನೀಡಿದ್ದಾರೆ.

 ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ತನ್ನ ಭಯಾನಕ ಅನುಭವವನ್ನು ಹೇಳಿಕೊಂಡ ಸೂರ್ಯಪ್ರಕಾಶ,‘ ದೊಡ್ಡ ಗುಂಪೊಂದು ಘೋಷಣೆಗಳನ್ನು ಕೂಗುತ್ತ ಕ್ಯಾಂಪಸ್ ಪ್ರವೇಶಿಸಿತ್ತು. ನನ್ನ ರೂಮನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು. ಬಾಗಿಲು ತೆರೆಯುವಂತೆ ಕೂಗುತ್ತಿದ್ದ ಅವರು ಅದನ್ನು ಬಲವಾಗಿ ಬಡಿಯುತ್ತಿದ್ದರು. ಅವರು ರೂಮಿನ ಎಲ್ಲ ಕಿಟಕಿಗಳ ಗಾಜುಗಳನ್ನು ಒಡೆದಿದ್ದರು. ಕೆಲವು ಗಾಜಿನ ಚೂರುಗಳು ನನ್ನ ತಲೆಗೆ ಬಡಿದಿದ್ದವು,ಆದರೆ ನಾನು ಟೊಪ್ಪಿಗೆ ಧರಿಸಿದ್ದರಿಂದ ಗಾಯಗಳಾಗಲಿಲ್ಲ. ಕೊನೆಗೂ ಅವರು ಬಾಗಿಲು ಒಡೆದು ರೂಮನ್ನು ಪ್ರವೇಶಿಸಿದ್ದರು. ನಾನು ಅಂಧ,ದಯವಿಟ್ಟು ನನ್ನನ್ನು ಬಿಡಿ ಎಂದು ಕೋರಿಕೊಂಡರೂ ಸುಳ್ಳು ಹೇಳುತ್ತಿದ್ದೇನೆ ಎಂದು ಅವರು ಜರಿದಿದ್ದರು. ಅವರು ಅತಿಯಾಗಿ ಮದ್ಯಪಾನ ಮಾಡಿದ್ದರು. ನಮಗೆ ಪಾಠವನ್ನು ಕಲಿಸುವುದಾಗಿ ಅವರು ಹೇಳುತ್ತಿದ್ದರು. ಕಬ್ಬಿಣದ ಸರಳುಗಳನ್ನು ಹಿಡಿದಿದ್ದ ಅವರು ನನ್ನ ರೂಮಿನಲ್ಲಿದ್ದ ಎಲ್ಲ ವಸ್ತುಗಳನ್ನೂ ಒಡೆದುಹಾಕಿದ್ದಾರೆ. ನನ್ನ ಶರೀರದ ತುಂಬೆಲ್ಲ ಗಾಯಗಳಾಗಿವೆ ’ಎಂದು ಹೇಳಿದರು.

ಪೊಲೀಸರೂ ಸಹಕರಿಸಲಿಲ್ಲ ಮತ್ತು ಹಾಸ್ಟೆಲ್‌ನಿಂದ ಏಮ್ಸ್‌ಗೆ ತೆರಳಲು ತನಗೆ ನೆರವಾದವರನ್ನು ಅವರು ಬೆದರಿಸಿದ್ದರು. ವಿವಿ ಸಿಬ್ಬಂದಿಗಳೂ ವಿದ್ಯಾರ್ಥಿಗಳ ನೆರವಿಗೆ ಬಂದಿರಲಿಲ್ಲ ಎಂದು ಸೂರ್ಯಪ್ರಕಾಶ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡದಂತೆ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ಭವಿಷ್ಯದಲ್ಲಿ ಯಾರಿಗೂ ಇಂತಹ ಗೂಂಡಾಗಳನ್ನು ಎದುರಿಸುವ ಸ್ಥಿತಿ ಬರದಿರಲಿ ಎಂದು ತಾನು ಹಾರೈಸುತ್ತೇನೆ. ಇಂತಹ ಭೀತಿ ತುಂಬಿದ ವಾತಾವರಣದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News