ಬಂಧನ ಕೇಂದ್ರ ಪ್ರಸ್ತಾವಕ್ಕೆ ತೆಲಂಗಾಣ ಸರಕಾರದ ನಿರಾಸಕ್ತಿ

Update: 2020-01-06 18:25 GMT

ಹೈದರಾಬಾದ್, ಜ.5: ತೆಲಂಗಾಣದಲ್ಲಿ ಬಂಧನ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಗೃಹ ಸಚಿವಾಲಯ ತೆಲಂಗಾಣ ಸರಕಾರಕ್ಕೆ 2018ರಲ್ಲಿ ಪತ್ರ ಬರೆದಿದ್ದರೂ ರಾಜ್ಯದಲ್ಲಿ ಇನ್ನೂ ಈ ಪ್ರಸ್ತಾವ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಯಾವುದಾದರೂ ಪ್ರದೇಶದಲ್ಲಿ ಬಂಧನ ಕೇಂದ್ರ ಸ್ಥಾಪಿಸುವಂತೆ ತಿಳಿಸಿ ಗೃಹ ಸಚಿವಾಲಯ ತೆಲಂಗಾಣ ಸರಕಾರಕ್ಕೆ ಪತ್ರ ಬರೆದಿತ್ತು. ವೀಸಾ ಅವಧಿ ಮೀರಿ ರಾಜ್ಯದಲ್ಲಿ ವಾಸ್ತವ್ಯವಿರುವ ವಿದೇಶಿಯರು, ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಗಡೀಪಾರು ಪ್ರಕ್ರಿಯೆಗೆ ಕಾಯುತ್ತಿರುವ ವಿದೇಶಿಯರನ್ನು ಇರಿಸಲು ಬಂಧನ ಕೇಂದ್ರದ ಅಗತ್ಯವಿದೆ ಎಂದು ಗೃಹ ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿತ್ತು.

 ಕೇಂದ್ರ ಸರಕಾರದಿಂದ ಬಂದ ಪತ್ರದ ಬಗ್ಗೆ ತೆಲಂಗಾಣದ ಉನ್ನತ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಹಲವು ಕಚೇರಿಗಳಿಗೆ ಸುತ್ತೋಲೆ ರವಾನಿಸಲಾಗಿತ್ತು. ಅಂತಿಮವಾಗಿ ಈ ಯೋಜನೆಯ ಫೈಲು ಮೂಲೆ ಸೇರಿದ್ದು ಬಂಧನ ಕೇಂದ್ರ ಸ್ಥಾಪಿಸುವ ಯೋಜನೆ ಸರಕಾರದ ಆದ್ಯತಾ ಪಟ್ಟಿಯಲ್ಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಆದರೆ ಈಗ ಅಧಿಕಾರಿಗಳಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಕ್ರಿಮಿನಲ್ ಅಪರಾಧದಲ್ಲಿ ಜೈಲುಶಿಕ್ಷೆಗೆ ಒಳಗಾಗಿ ಬಿಡುಗಡೆಗೊಂಡಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ತಾತ್ಕಾಲಿಕವಾಗಿ ಇರಿಸಲು ಸ್ಥಳವಿಲ್ಲದೆ ಅಂತಿಮವಾಗಿ ನಗರದಲ್ಲಿರುವ ಪೊಲೀಸ್ ಸಂಕೀರ್ಣ(ಸ್ಟೇಷನ್ ಹೌಸ್)ದಲ್ಲಿರುವ ಲಾಕಪ್‌ನೊಳಗೆ ಇರಿಸಲಾಗಿತ್ತು. ಅವರ ದೈನಂದಿನ ವೆಚ್ಚವನ್ನು ಪೊಲೀಸರೇ ಭರಿಸಬೇಕಾಯಿತು. ವಿದೇಶಿಯರನ್ನು ಗಡೀಪಾರು ಮಾಡುವ ಮೊದಲು ಪೊಲೀಸ್ ಅಧಿಕಾರಿಗಳೇ ತಾತ್ಕಾಲಿಕ ವ್ಯವಸ್ಥೆ ಮಾಡುವ ಅನಿವಾರ್ಯತೆ ಎದುರಾಗಿದೆ. ತಮಗೆ ಬೇರೆ ಆಯ್ಕೆಯಿಲ್ಲ. ಅವರನ್ನು ಗಡೀಪಾರು ಮಾಡುವವರೆಗೆ ತಮ್ಮ ನಿಗಾದಲ್ಲೇ ಇರಿಸುವ ಜವಾಬ್ದಾರಿಯಿದೆ ಎಂದು ಪೊಲೀಸರು ಹೇಳಿದ್ದಾರೆ.

 ತೆಲಂಗಾಣದಲ್ಲಿ, ಅದರಲ್ಲೂ ಪ್ರಮುಖವಾಗಿ ಹೈದರಾಬಾದ್‌ನಲ್ಲಿ ಹಲವು ಸಾವಿರ ವಿದೇಶಿಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ನೈಜೀರಿಯಾದ ಪ್ರಜೆಗಳು ಮಾದಕ ವಸ್ತುಗಳ ಸಾಗಾಟ ಪ್ರಕರಣದಲ್ಲಿ ಹಲವು ಬಾರಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News