ಇರಾನ್ ಜನರಲ್ ಸುಲೈಮಾನಿ ಅಂತ್ಯಕ್ರಿಯೆ ವೇಳೆ ಕಾಲ್ತುಳಿತ: 35 ಮಂದಿ ಮೃತ್ಯು
ಟೆಹ್ರಾನ್, ಜ.7: ಅಮೆರಿಕದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಇರಾನ್ ಸೇನಾಧಿಕಾರಿ ಕಾಸಿಂ ಸುಲೇಮಾನಿಯ ಅಂತಿಮ ಯಾತ್ರೆಯ ಸಂದರ್ಭ ನಡೆದ ಕಾಲ್ತುಳಿತದಲ್ಲಿ ಕನಿಷ್ಟ 35 ಮಂದಿ ಮೃತಪಟ್ಟಿದ್ದು, 48 ಜನ ಗಾಯಗೊಂಡಿರುವುದಾಗಿ ಇರಾನ್‌ನ ಸರಕಾರಿ ಟೆಲಿವಿಷನ್ ವರದಿ ಮಾಡಿದೆ.
ಕಾಸಿಂ ಸುಲೈಮಾನಿಯವರ ಹುಟ್ಟೂರು ಕೆರ್ಮನ್‌ನಲ್ಲಿ ಈ ದುರ್ಘಟನೆ ನಡೆದಿದೆ. 48 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೆಲವ ರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕಪ್ಪು ಬಟ್ಟೆ ತೊಟ್ಟು, ಸುಲೈಮಾನಿಯ ಭಾವಚಿತ್ರದ ಪೋಸ್ಟರ್ ಹಿಡಿದುಕೊಂಡು ಸುಮಾರು 1 ಮಿಲಿಯನ್‌ಗೂ ಅಧಿಕ ಜನರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಕಿರಿದಾದ ರಸ್ತೆಯಲ್ಲಿ ಜನರು ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕಾಗಿ ಮುಗಿಬಿದ್ದರು. ನೂಕುನುಗ್ಗಲಿನಲ್ಲಿ ದುರ್ಘಟನೆ ಸಂಭವಿಸಿದೆ ಎಂದು ಇರಾನ್‌ನ ತುರ್ತು ವೈದ್ಯಕೀಯ ಸೇವಾ ವಿಭಾಗದ ಮುಖ್ಯಸ್ಥರನ್ನು ಉಲ್ಲೇಖಿಸಿ ಟಿವಿಯ ವರದಿ ತಿಳಿಸಿದೆ.
ತಮ್ಮ ಉನ್ನತ ಸೇನಾಧಿಕಾರಿ ಸುಲೈಮಾನಿಯ ಸಾವಿಗೆ ಪ್ರತೀಕಾರವಾಗಿ ಅಮೆರಿಕ ಬೆಂಬಲಿಸುವ ಪ್ರದೇಶಗಳನ್ನು ಸುಟ್ಟು ಬಿಡುವುದಾಗಿ ಇರಾನ್‌ನ ರೆವೊಲ್ಯುಷನರಿ ಗಾರ್ಡ್ಸ್‌ನ ಮುಖಂಡ ಹೊಸೈನ್ ಸಲಾಮಿ ಎಚ್ಚರಿಕೆ ನೀಡಿದಾಗ ಜನರ ಗುಂಪು ‘ಇಸ್ರೇಲ್‌ಗೆ ಮರಣಕಾಲ’ ಎಂದು ಘೋಷಿಸಿತು. ಇರಾನ್‌ನ ಪರಮೋಚ್ಛ ನಾಯಕ ಆಯತುಲ್ಲಾ ಖಾಮಿನೈ ಹಾಗೂ ಇತರ ಮುಖಂಡರೂ ಅಮೆರಿಕ ವಿರುದ್ಧ ಪ್ರತೀಕಾರದ ಎಚ್ಚರಿಕೆ ನೀಡಿರುವುದನ್ನು ಟಿವಿ ವರದಿಯಲ್ಲಿ ಉಲ್ಲೇಖಿಸಲಾಗಿದೆ . ಅಮೆರಿಕದ ವಾಯುಪಡೆ ಶುಕ್ರವಾರ ಬಗ್ದಾದ್ ವಿಮಾನ ನಿಲ್ದಾಣದ ಹೊರಗೆ ವಾಹನಗಳ ಸಾಲಿನ ಮೇಲೆ ನಡೆಸಿದ ನಿಖರ ಡ್ರೋನ್ ದಾಳಿಯಲ್ಲಿ ಇರಾನ್‌ನ ಎರಡನೇ ಅತ್ಯಂತ ಪ್ರಭಾವೀ ಎನಿಸಿದ್ದ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಹಾಗೂ ಇತರ 9 ಸೇನಾಧಿಕಾರಿಗಳು ಸಾವನ್ನಪ್ಪಿದ್ದರು.