×
Ad

​ನ್ಯಾಯಾಲಯದ ತೀರ್ಪು ಹೊರಬರುತ್ತಿದ್ದಂತೆ ಕಣ್ಣೀರಿಟ್ಟ ನಿರ್ಭಯಾ ಹಂತಕರು

Update: 2020-01-07 18:23 IST

ಹೊಸದಿಲ್ಲಿ, ಜ.7: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ  ನಾಲ್ವರು ಆರೋಪಿಗಳಿಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ಡೆತ್ ವಾರಂಟ್ ಹೊರಡಿಸಿದೆ .ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದ್ದಂತೆ  ತಿಹಾರ್ ಜೈಲಿನಲ್ಲಿರುವ ಅಪರಾಧಿಗಳು ಕಣ್ಣೀರಿಟ್ಟಿದ್ದಾರೆ.
ಅಪರಾಧಿಗಳನ್ನು ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ನ್ಯಾಯಾಲಯ ಆದೇಶ ನೀಡಿದೆ.
 ಮಂಗಳವಾರ ಬೆಳಗ್ಗೆಯಿಂದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ ವೀಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕರಣದ ವಿಚಾರಣೆ ನಡೆದಿತ್ತು. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರು ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್ ಮತ್ತು ಮುಖೇಶ್ ಸಿಂಗ್.  ಇವರಿಗೆ  ಮಧ್ಯಾಹ್ನ 3.30ಕ್ಕೆ  ಗಲ್ಲು ಶಿಕ್ಷೆಯ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ   ಡೆತ್ ವಾರಂಟ್ ಹೊರಡಿಸಿದರು. 
 ಈ  ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಲ್ಲಿ ಓರ್ವನಾದ  ಅಕ್ಷಯ್‌  2017ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ನಂತರ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ದೃಢಪಡಿಸಿತ್ತು..
2019 ಜುಲೈ 9 ರಂದು ಈ ಪ್ರಕರಣದಲ್ಲಿ ಇತರ ಮೂವರು ಅಪರಾಧಿಗಳಾದ ಮುಖೇಶ್ , ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ  ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು  ಸುಪ್ರೀಂ ಕೋರ್ಟ್  ವಜಾಗೊಳಿಸಿತ್ತು. 
ಸಾಕ್ಷಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ  ಸಲ್ಲಿಸಲಾದ ಅರ್ಜಿ ವಜಾ 
2012 ರ ಪ್ರಕರಣದಲ್ಲಿ ಈ  ಭೀಕರ ಘಟನೆ ನಡೆದಾಗ 23 ವರ್ಷದ ಸಂತ್ರಸ್ತೆಯ ಸ್ನೇಹಿತ ಪ್ರತ್ಯಕ್ಷ ಸಾಕ್ಷಿಯಾಗಿದ್ದನು. ಅವನ ಮೇಲೂ ಹಲ್ಲೆ ನಡೆದಿತ್ತು.  ಆತನ ವಿರುದ್ಧ ಎಫ್ ಐಆರ‍್ ದಾಖಲಿಸುವಂತೆ ಮರಣದಂಡನೆ ಶಿಕ್ಷೆಗೆ ಗುರಿಯಾದ ನಾಲ್ವರ ಪೈಕಿ ಒಬ್ಬನ  ತಂದೆ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ನ್ಯಾಯಾಲಯ ಸೋಮವಾರ ವಜಾಗೊಳಿಸಿತ್ತು.
 ಪವನ್ ಕುಮಾರ್ ಗುಪ್ತಾ ಎಂಬಾತನ  ತಂದೆ ಹೀರಾ ಲಾಲ್ ಗುಪ್ತಾ ಅವರು ಸಲ್ಲಿಸಿದ ದೂರಿನಲ್ಲಿ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ವಿವಿಧ ಸುದ್ದಿ ವಾಹಿನಿಗಳಲ್ಲಿ ಸಂದರ್ಶನಗಳಿಗೆ ಹಾಜರಾಗಲು ಸಾಕ್ಷಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.    
ನ್ಯಾಯಕ್ಕಾಗಿ ಹೋರಾಟ
ಈ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಕಾರ್ಯವಿಧಾನವನ್ನು ಶೀಘ್ರವಾಗಿ ಜಾರಿಗೊಳಿಸುವಂತೆ  ನಿರ್ಭಯಾ ಹೆತ್ತವರು ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುಖೇಶ್, ಪವನ್, ವಿನಯ್ ಮತ್ತು ಅಕ್ಷಯ್ ಎಂಬ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿ ಪಿಐಎಲ್ ನ್ನು ಸುಪ್ರೀಂ ಕೋರ್ಟ್ 2018 ರ ಡಿಸೆಂಬರ್ 12 ರಂದು ವಜಾಗೊಳಿಸಿತ್ತು.  
ಅತ್ಯಾಚಾರ ಪ್ರಕರಣ

2012 ರ ಡಿಸೆಂಬರ್ 16 ರಂದು  23 ವರ್ಷದ ವೈದ್ಯಕೀಯ ವಿದ್ಯಾರ್ಥಿ ನಿರ್ಭಯಾ ಮೇಲೆ  ಚಲಿಸುವ ಬಸ್‌ನಲ್ಲಿ  ಆರು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿ  ಕಬ್ಬಿಣದ ರಾಡ್‌ನಿಂದ ಚಿತ್ರಹಿಂಸೆ ನೀಡಿ ಆಕೆಯನ್ನು ಬಸ್ ನಿಂದ ಹೊರಗೆ ಎಸೆದಿದ್ದರು.  ಆಕೆಯೊಂದಿಗೆ  ಬಸ್ ನಲ್ಲಿದ್ದ  ಸ್ನೇಹಿತನಿಗೂ  ಹಂತಕರು ಹಲ್ಲೆ ನಡೆಸಿದ್ದರು. .
ಗಂಭೀರ ಗಾಯಗೊಂಡಿದ್ದ ನಿರ್ಭಯಾಗೆ  ಕೆಲವು ದಿನಗಳವರೆಗೆ ಹೊಸದಿಲ್ಲಿಯ  ಆಸ್ಪತ್ರೆಯಲ್ಲಿ  ಚಿಕಿತ್ಸೆಯನ್ನು ನೀಡಲಾಗಿತ್ತು. ಆನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ  ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು  ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29, 2012 ರಂದು ಕೊನೆಯುಸಿರೆಳೆದರು 
ಆರು ಮಂದಿ  ಆರೋಪಿಗಳಲ್ಲಿ ಒಬ್ಬಾತ   ಬಾಲಾಪರಾಧಿಯಾಗಿದ್ದನು. ಮತ್ತೊಬ್ಬ ಆರೋಪಿ ರಾಮ್ ಸಿಂಗ್ ಜೈಲಿನಲ್ಲಿ ನೇಣು ಹಾಕಿಕೊಂಡಿದ್ದಾನೆ. .

ಸೆ.13, 2013ರಂದು ಉಳಿದ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಲಯ ತೀರ್ಪು ನೀಡಿತ್ತು. ಮಾ.13, 2014ರಂದು  ಗಲ್ಲು ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್‌ ಎತ್ತಿ ಹಿಡಿದಿತ್ತು.  ಮರಣದಂಡನೆಯನ್ನು ಪ್ರಶ್ನಿಸಿ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್  ಸಲ್ಲಿಸಿದ್ದ ಕೊನೆಯ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ವಜಾಗೊಳಿಸಿತ್ತು, 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News