ಮುಷ್ಕರದಲ್ಲಿ ಭಾಗಿಯಾದರೆ ವೇತನ ಕಡಿತ,ಶಿಸ್ತು ಕ್ರಮ: ಸರಕಾರಿ ನೌಕರರಿಗೆ ಕೇಂದ್ರದ ಎಚ್ಚರಿಕೆ

Update: 2020-01-07 16:17 GMT
ಫೈಲ್ ಚಿತ್ರ

ಹೊಸದಿಲ್ಲಿ,ಜ.7: ವಿವಿಧ ಕೇಂದ್ರಿಯ ಕಾರ್ಮಿಕ ಒಕ್ಕೂಟಗಳು ಕರೆ ನೀಡಿರುವ ಜ.8ರ ಮುಷ್ಕರದಲ್ಲಿ ಭಾಗಿಯಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರವು ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ.

ಕಾರ್ಮಿಕ ಸುಧಾರಣೆ, ವಿದೇಶಿ ನೇರ ಹೂಡಿಕೆ ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಮತ್ತು ಕನಿಷ್ಠ ವೇತನ ಹಾಗೂ ಸಾಮಾಜಿಕ ಸುರಕ್ಷತೆ ಸೇರಿದಂತೆ ಕಾಮಿಕ ವರ್ಗದ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಸಂಘಟನೆಗಳು ನಾಳೆ ಭಾರತ ಬಂದ್‌ಗೆ ಕರೆನೀಡಿವೆ.

ಯಾವುದೇ ರೂಪದಲ್ಲಿ ಮುಷ್ಕರದಲ್ಲಿ ಭಾಗಿಯಾಗುವ ಉದ್ಯೋಗಿಯು ವೇತನ ಕಡಿತ ಮತ್ತು ಸೂಕ್ತ ಶಿಸ್ತುಕ್ರಮ ಸೇರಿದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಸಚಿವಾಲಯವು ಆದೇಶದಲ್ಲಿ ಹೇಳಿದೆ.

ಚಾಲ್ತಿಯಲ್ಲಿರುವ ನಿರ್ದೇಶಗಳು ಸರಕಾರಿ ನೌಕರರು ಸಾಮೂಹಿಕ ಸಾಂದರ್ಭಿಕ ರಜೆ ಸೇರಿದಂತೆ ಯಾವುದೇ ರೂಪದಲ್ಲಿ ಮುಷ್ಕರದಲ್ಲಿ ಭಾಗಿಯಾಗುವುದನ್ನು ನಿಷೇಧಿಸುತ್ತವೆ. ಸಂಘಟನೆಯನ್ನು ಸ್ಥಾಪಿಸುವ ಹಕ್ಕು ಮುಷ್ಕರ ಅಥವಾ ಪ್ರತಿಭಟನೆ ನಡೆಸಲು ಯಾವುದೇ ಖಾತರಿ ಹಕ್ಕನ್ನು ಒಳಗೊಂಡಿರುವುದಿಲ್ಲ. ನೌಕರರು ಮುಷ್ಕರದಲ್ಲಿ ತೊಡಗಲು ಅವಕಾಶ ನೀಡುವ ಯಾವುದೇ ಶಾಸನಬದ್ಧ ನಿಯಮವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಷ್ಕರದ ಅವಧಿಯಲ್ಲಿ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಜೆ ಮಂಜೂರು ಮಾಡದಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವ ಆದೇಶವು,ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಿರ್ದೇಶ ನೀಡಿದೆ. ಕಟ್ಟೆಚ್ಚರವನ್ನು ಕಾಯ್ದುಕೊಳ್ಳುವಂತೆ ಸಿಐಎಸ್‌ಎಫ್‌ಗೂ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News