ಹಿಂದೂ ಜೋಡಿಯ ಮದುವೆ ಕಾರ್ಯಕ್ರಮಕ್ಕೆ ಸಜ್ಜಾದ ಮಸೀದಿ

Update: 2020-01-07 15:32 GMT
ಸಾಂದರ್ಭಿಕ ಚಿತ್ರ

ಅಲಪ್ಪುಝಾ(ಕೇರಳ),ಜ.7: ದೇಶದ ಜಾತ್ಯತೀತ ಸ್ವರೂಪವು ಶಿಥಿಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಚೇರವಲ್ಲಿ ಮುಸ್ಲಿಮ್ ಜಮಾಅತ್‌ ನ ಸದಸ್ಯರು ತಮ್ಮ ಮಸೀದಿಯ ಆವರಣದಲ್ಲಿ ಹಿಂದೂ ಯುವತಿಯ ಮದುವೆಯನ್ನು ನಡೆಸಲು ಸಜ್ಜಾಗಿದ್ದಾರೆ.

ತನ್ನ ಪುತ್ರಿಯ ಮದುವೆಗೆ ನೆರವು ಕೋರಿ ಕಾಯಂಕುಳಂ ನಿವಾಸಿ,ದಿ.ಅಶೋಕನ್ ಎನ್ನುವವರ ಪತ್ನಿ ಬಿಂದು ಮನವಿಯನ್ನು ಸಲ್ಲಿಸಿದ್ದರು. ತಾನು ಈ ವಿಷಯವನ್ನು ಜಮಾಅತ್ ‌ನ ಸದಸ್ಯರೊಂದಿಗೆ ಚರ್ಚಿಸಿದಾಗ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯಹಸ್ತ ಚಾಚಲು ಅವರು ಒಮ್ಮನಸ್ಸಿನಿಂದ ಒಪ್ಪಿದ್ದರು. ಬಿಂದು ತನ್ನ ಮೂವರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ, ಅವರ ಪತಿ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಅವರ ಸ್ಥಿತಿಯ ಬಗ್ಗೆ ತನಗೆ ಚೆನ್ನಾಗಿ ಗೊತ್ತಿದೆ ಎಂದು ಜಮಾಅತ್‌ ನ ಅಧ್ಯಕ್ಷ ಹಾಗೂ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಜಿಲ್ಲಾಧ್ಯಕ್ಷರೂ ಆಗಿರುವ ನಜ್ಮುದ್ದೀನ್ ಅಲುಮೂತ್ತಿಲ್ ತಿಳಿಸಿದರು.

ಬಿಂದು ಪುತ್ರಿ ಅಂಜುವಿನ ಮದುವೆಗಾಗಿ ಜಮಾಅತ್ ಸದಸ್ಯರು ಭರದ ಸಿದ್ಧತೆಯಲ್ಲಿ ತೊಡಗಿದ್ದು,ಜ.19ರಂದು ಮಸೀದಿಯ ಆವರಣದಲ್ಲಿ ನಡೆಯಲಿರುವ ವಿವಾಹ ಮಹೋತ್ಸವದಲ್ಲಿ ಬಿಂದು ಮತ್ತು ಕಾಯಂಕುಳಂ ನಿವಾಸಿ ಶರತ್ ಶಶಿ ಅವರು ಸಪ್ತಪದಿಯನ್ನು ತುಳಿಯಲಿದ್ದಾರೆ.

ವಿವಾಹವು ಹಿಂದು ವಿಧಿಗಳಂತೆ ನಡೆಯಲಿದೆ. ಮಸೀದಿ ಸಮಿತಿಯು 10 ಪವನ್ ಚಿನ್ನ ಮತ್ತು ಎರಡು ಲ.ರೂ.ಗಳನ್ನು ಕೊಡುಗೆಯಾಗಿ ನೀಡಲಿದೆ. ವಿವಾಹದ ಎಲ್ಲ ವೆಚ್ಚವನ್ನೂ ಭರಿಸಲಿದೆ ಎಂದು ತಿಳಿಸಿದ ನಜ್ಮುದ್ದೀನ್,ಕೆಲವರು ಇದನ್ನು ದೇಶದಲ್ಲಿಯ ಇತ್ತೀಚಿನ ಬೆಳವಣಿಗೆಗಳೊಂದಿಗೆ ತಳುಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಬಿಂದು ಪತಿ ತೀರಿಕೊಂಡಾಗ ಅಂತ್ಯಸಂಸ್ಕಾರ ನಡೆಸಲೂ ಕುಟುಂಬದ ಬಳಿ ಹಣವಿಲ್ಲವೆಂಬ ದೈನಿಕವೊಂದರಲ್ಲಿಯ ವರದಿಯನ್ನು ತಾನು ನೋಡಿದ್ದೆ. 10ನೇ ತರಗತಿಯ ಪರೀಕ್ಷೆಗೆ ಹಾಜರಾಗಲಿದ್ದ ಬಿಂದುವಿನ ಪುತ್ರ ಆನಂದನಿಗೆ ತಂದೆಯ ಸಾವಿನ ಬಗ್ಗೆ ಗೊತ್ತಿರಲಿಲ್ಲ. ಮರುದಿನ ತಾನು ಕುಟುಂಬವನ್ನು ಭೇಟಿ ಮಾಡಿ ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದೆ. ಆಗಿನಿಂದಲೂ ಬಿಂದು ಮತ್ತು ಅವರ ಕುಟುಂಬ ತನಗೆ ಗೊತ್ತು. ಕಳೆದ ವರ್ಷದ ಅಕ್ಟೋಬರ್ 2ರಂದು ತನ್ನನ್ನು ಸಂಪರ್ಕಿಸಿದ್ದ ಬಿಂದು ಪುತ್ರಿಯ ಮದುವೆಗೆ ನೆರವು ಕೋರಿದ್ದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News