ಮುಷ್ಕರಕ್ಕೆ ವ್ಯಾಪಕ ಬೆಂಬಲ: ಕಾಸರಗೋಡು ಸಂಪೂರ್ಣ ಬಂದ್

Update: 2020-01-08 05:17 GMT

ಕಾಸರಗೋಡು, ಜ.8: ಕಾರ್ಮಿಕ ಸುಧಾರಣೆ,ವಿದೇಶಿ ನೇರ ಹೂಡಿಕೆ ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರ ಕಾಸರಗೋಡಿನಲ್ಲಿ ಬಂದ್ ಆಗಿ ಪರಿವರ್ತನೆಗೊಂಡಿದೆ.

ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಖಾಸಗಿ, ಕೆಎಸ್ಸಾರ್ಟಿಸಿ ಬಸ್ಸುಗಳು ಬೆಳಗ್ಗೆಯಿಂದಲೇ ರಸ್ತೆಗಿಳಿದಿಲ್ಲ. ಆಟೋ, ಟ್ಯಾಕ್ಸಿ ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಕೆಲವೇ ಕೆಲವು ಖಾಸಗಿ ವಾಹನಗಳು ಮಾತ್ರ ಸಂಚಾರ ನಡೆಸುತ್ತಿವೆ.

ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕೆಲವೇ ಕೆಲವು ಅಂಗಡಿ ಮುಂಗಟ್ಟುಗಳು ಮಾತ್ರ ತೆರೆದಿವೆ. ಜನಸಂಚಾರ ವಿರಳವಾಗಿದೆ. ಶಾಲಾ ಕಾಲೇಜುಗಳಲ್ಲಿ ಹಾಜರಾತಿ ವಿರಳವಾಗಿದೆ. ಹತ್ತು ಗಂಟೆ ಬಳಿಕ ರಸ್ತೆಗಿಳಿದ ವಾಹನಗಳನ್ನು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ತಡೆದ ಘಟನೆ ನಡೆದಿದೆ.

ಬಿಜೆಪಿ ಬೆಂಬಲಿತ ಬಿಎಂಎಸ್ ಹೊರತುಪಡಿಸಿ ಉಳಿದೆಲ್ಲಾ ಸಂಘಟನೆಗಳು ಇಂದಿನ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಬ್ಯಾಂಕ್, ವಿಮಾ ಕಂಪೆನಿಗಳು, ಸಾರ್ವಜನಿಕ ವಲಯ ಸಂಸ್ಥೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

ಮುಷ್ಕರದ ಹಿನ್ನಲೆಯಲ್ಲಿ ಹಲವೆಡೆ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News