ಅಸ್ಸಾಂನಲ್ಲಿ ಭಾರೀ ಪ್ರತಿಭಟನೆ: 'ಖೇಲೋ ಇಂಡಿಯಾ' ಉದ್ಘಾಟನೆಯಲ್ಲಿ ಭಾಗವಹಿಸದಿರಲು ಮೋದಿ ನಿರ್ಧಾರ

Update: 2020-01-08 18:29 GMT

ಹೊಸದಿಲ್ಲಿ, ಜ.8: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕಳೆದ ಕೆಲವು ವಾರಗಳಿಂದ ತೀವ್ರ ಪ್ರತಿಭಟನೆ ನಡೆಯುತ್ತಿರುವ ಅಸ್ಸಾಂನ ಗುವಾಹಟಿಯಲ್ಲಿ ಜ.10ರಂದು ನಡೆಯಲಿರುವ ‘ಖೇಲೊ ಇಂಡಿಯಾ ಯುವ ಕ್ರೀಡಾಕೂಟ’ದ ಉದ್ಘಾಟನೆಯ ಆಹ್ವಾನವನ್ನು ಪ್ರಧಾನಿ ಮೋದಿ ತಿರಸ್ಕರಿಸಿದ್ದಾರೆ. ಸಮಯದ ಕೊರತೆಯಿಂದ ಮೋದಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಗೆ ತನಗೆ ಬರಲು ಸಾಧ್ಯವಾಗದು ಎಂದು ಪ್ರಧಾನಿ ಕ್ರೀಡಾ ಇಲಾಖೆ ಹಾಗೂ ಅಸ್ಸಾಂ ಸರಕಾರಕ್ಕೆ ತಿಳಿಸಿದ್ದಾರೆ. ಪ್ರಧಾನಿಯವರಿಂದ ಯುವ ಕ್ರೀಡಾಕೂಟ ಉದ್ಘಾಟಿಸುವ ಪ್ರಯತ್ನ ಸಫಲವಾಗಲಿಲ್ಲ. ಅವರ ಭೇಟಿ ಕಾರ್ಯಕ್ರಮ ರದ್ದಾಗಿದೆ ಎಂದು ಅಸ್ಸಾಂ ಬಿಜೆಪಿ ವಕ್ತಾರ ದೇವನ್ ಧ್ರುಬಜ್ಯೋತಿ ಮರಾಲ್ ತಿಳಿಸಿರುವುದಾಗಿ ವರದಿಯಾಗಿದೆ.

ಮೋದಿ ಆಹ್ವಾನ ತಿರಸ್ಕರಿಸಿದ ಬಳಿಕ ಅಸ್ಸಾಂ ಸರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖೇಲೊ ಇಂಡಿಯಾ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆಯಿದೆ. ಇದು ಕೇವಲ ಕ್ರೀಡಾಕೂಟ ಮಾತ್ರವಲ್ಲ, ಇದೊಂದು ಅಭಿಯಾನವಾಗಿದೆ. ಯುವಜನರಲ್ಲಿ ಕ್ರೀಡೆ ಮತ್ತು ದೈಹಿಕ ಕ್ಷಮತೆಯನ್ನು ಉತ್ತೇಜಿಸುವ ಜೊತೆಗೆ, ಭಾರತವನ್ನು ಕ್ರೀಡಾಕ್ಷೇತ್ರದ ಬಲಿಷ್ಟ ದೇಶವನ್ನಾಗಿಸುವ ಯುವ ಕ್ರೀಡಾಳುಗಳ ಕನಸನ್ನು ಸಾಕಾರಗೊಳಿಸುವ ಅರಿವನ್ನು ಪೋಷಕರಲ್ಲಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಖೇಲ್ ಇಂಡಿಯಾ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ನೀಡಿರುವುದು ಈ ಕನಸನ್ನು ನನಸಾಗಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು ಮಂಗಳವಾರ (ಜನವರಿ 7ರಂದು ಹೇಳಿದ್ದರು.

ಪೌರತ್ವ ಕಾಯ್ದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಜಪಾನ್‌ನ ಪ್ರಧಾನಿ ಶಿಂಜೊ ಅಬೆ ಭಾರತ ಭೇಟಿ ಕಾರ್ಯಕ್ರಮ ರದ್ದಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಇದೊಂದು ಅಭಿಯಾನ ಎಂದಿದ್ದರು ಮೋದಿ

ಖೇಲ್ ಇಂಡಿಯಾ ಕ್ರೀಡಾಕೂಟ ಕೇವಲ ಒಂದು ಸ್ಪರ್ಧಾಕೂಟವಲ್ಲ. ಇದೊಂದು ಅಭಿಯಾನವಾಗಿದ್ದು ರಾಷ್ಟ್ರೀಯ ಪ್ರಾಮುಖ್ಯತೆಯ ಕ್ರೀಡಾಕೂಟ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಗುವಾಹಟಿಯಲ್ಲಿ ನಡೆಯಲಿರುವ 3ನೇ ಆವೃತ್ತಿಯ ಕ್ರೀಡಾಕೂಟದಲ್ಲಿ ಸುಮಾರು 6,800 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News