ಸಿಎಎ ಕುರಿತು ಮೊಂಡುತನಕ್ಕೆ ಬಿಜೆಪಿ ಭಾರೀ ಬೆಲೆ ತೆರಲಿದೆ: ಅಮರಿಂದರ್ ಸಿಂಗ್

Update: 2020-01-08 14:38 GMT
ಫೈಲ್ ಚಿತ್ರ

ಚಂಡಿಗಡ,ಜ.8: ಯಾವುದೇ ಸಂದರ್ಭದಲ್ಲಿಯೂ ಕೇಂದ್ರವು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ಜಾರಿಗೊಳಿಸಲಿದೆ ಎಂದು ಪ್ರತಿಪಾದಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬುಧವಾರ ತರಾಟೆಗೆತ್ತಿಕೊಂಡ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು,ಬಿಜೆಪಿ ತನ್ನ ಮೊಂಡುತನಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಹೇಳಿದರು.

ಚೌಹಾಣ್ ಅವರು ಮಂಗಳವಾರ ಲುಧಿಯಾನಾದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಂಗ್,ಜನರ ಕೂಗಿಗೆ ಕಿವಿಗೊಡದಿರುವ ಅಥವಾ ಅವರ ಸಿಟ್ಟಿಗೆ ಪ್ರತಿಕ್ರಿಯಿಸದಿರುವ ಚುನಾಯಿತ ಸರಕಾರವು ಅವರ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ ಮತ್ತು ಪತನಗೊಳ್ಳುತ್ತದೆ ಎಂದರು.

ಸಿಎಎ ಕುರಿತು ತನ್ನ ಸರಕಾರದ ನಿಲುವು ಕುರಿತಂತೆ ಅವರು,‘ಈ ವಿಭಜನಕಾರಿ ಕಾಯ್ದೆಯನ್ನು ಪಂಜಾಬಿನಲ್ಲಿ ಅನುಷ್ಠಾನಿಸಲು ನಮ್ಮನ್ನು ಬಲವಂತಗೊಳಿಸುವಂತಿಲ್ಲ. ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ನಾನು ಅಥವಾ ಕಾಂಗ್ರೆಸ್ ವಿರುದ್ಧವಾಗಿಲ್ಲ. ಆದರೆ ಕಾಯ್ದೆಯಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯವನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ’ಎಂದರು.

ಸಿಎಎ ವಿರುದ್ಧದ ರಾಷ್ಟ್ರಾದ್ಯಂತ ಆಕ್ರೋಶವಿದ್ದರೂ ಕಾಯ್ದೆಯ ಅಸಾಂವಿಧಾನಿಕತೆಯನ್ನು ಒಪ್ಪಿಕೊಳ್ಳಲು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ನಿರಾಕರಿಸುತ್ತಿದೆ ಎಂದ ಅವರು,ಇತರ ಬಿಜೆಪಿ ನಾಯಕರಂತೆ ಚೌಹಾಣ್ ಅವರಿಗೂ ಸಿಎಎ ಪರಿಣಾಮಗಳ ಬಗ್ಗೆ ಅರಿವಿಲ್ಲ ಎಂದರು.

ಸಿಎಎ ವಿರುದ್ಧ ಪ್ರತಿಭಟನೆಗಳಿಗೆ ಕಾಂಗ್ರೆಸ್‌ನ ಪ್ರಚೋದನೆ ಕಾರಣ ಎಂಬ ಚೌಹಾಣ್ ಆರೋಪವನ್ನು ಸಿಂಗ್ ತಿರಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News