'ಚಪಾಕ್'ನಲ್ಲಿ ಆ್ಯಸಿಡ್ ದಾಳಿಕೋರ ನಯೀಮ್ ಖಾನ್ ಹೆಸರನ್ನು 'ರಾಜೇಶ್' ಎಂದು ಬದಲಿಸಲಾಗಿದೆಯೇ?: ಇಲ್ಲಿದೆ ಸತ್ಯ

Update: 2020-01-08 17:28 GMT

ಹೊಸದಿಲ್ಲಿ: ಜೆಎನ್ ಯು ಮೇಲಿನ ಗೂಂಡಾದಾಳಿಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಭಾರೀ ಅಪಪ್ರಚಾರಗಳು ನಡೆಯುತ್ತಿವೆ.  

ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ದೀಪಿಕಾ ಅವರ ಮುಂದಿನ ಚಿತ್ರ 'ಚಪಾಕ್' ಬಹಿಷ್ಕರಿಸುವಂತೆ ಬಿಜೆಪಿ ನಾಯಕರೊಬ್ಬರು ಕರೆ ನೀಡಿದ್ದರು. ಇದೀಗ 'ಚಪಾಕ್' ಚಿತ್ರದ ವಿರುದ್ಧ ಅಪಪ್ರಚಾರ ಆರಂಭವಾಗಿದೆ.

'ಚಪಾಕ್' ಚಿತ್ರವು ನೈಜ ಕಥೆಯನ್ನಾಧರಿಸಿದ ಚಿತ್ರವಾಗಿದ್ದು, ಇದರಲ್ಲಿ ಆ್ಯಸಿಡ್ ದಾಳಿ ನಡೆಸಿದವನ ಹೆಸರನ್ನು 'ನಯೀಮ್ ಖಾನ್' ಬದಲು ಚಿತ್ರದಲ್ಲಿ 'ರಾಜೇಶ್' ಎಂದು ಬದಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ "ದೀಪಿಕಾ ಪಡುಕೋಣೆ ನಟನೆಯ ಚಪಾಕ್ ನಲ್ಲಿ ಆ್ಯಸಿಡ್ ದಾಳಿಕೋರ ನಯೀಮ್ ಖಾನ್ ನಿಂದ 'ರಾಜೇಶ್' ಎಂದು ಬದಲು' ಎಂದು 'ಸ್ವರಾಜ್ಯ ಮ್ಯಾಗಝಿನ್' ವರದಿ ಮಾಡಿತ್ತು.

ಈ ಪೋಸ್ಟ್ ಮತ್ತು ಸ್ವರಾಜ್ಯ ಮ್ಯಾಗಝಿನ್ ನ ಸುದ್ದಿ ಸಾವಿರಾರು ಬಾರಿ ರಿಟ್ವೀಟ್ ಆಗಿತ್ತು.

ಸತ್ಯಾಂಶವೇನು?

2005ರಲ್ಲಿ ಲಕ್ಷ್ಮಿ ಎಂಬ ಯುವತಿಯ ಮೇಲೆ ದಿಲ್ಲಿಯ ಖಾನ್ ಮಾರ್ಕೆಟ್ ನಲ್ಲಿ ನದೀಮ್ ಖಾನ್ ಮತ್ತು ಇತರ ಮೂವರು ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿದ್ದರು.

ಆದರೆ ಈ ಚಿತ್ರವನ್ನು ವೀಕ್ಷಿಸಿರುವ ಮತ್ತು ಚಿತ್ರತಂಡದ ಜೊತೆ ಮಾತನಾಡಿರುವ ವಿಮರ್ಶಕರೊಬ್ಬರು 'ಚಿತ್ರದಲ್ಲಿ ದಾಳಿಕೋರನ ಧರ್ಮವನ್ನು ಬದಲಿಸಿಲ್ಲ. ನದೀಮ್ ಖಾನ್ ನ ಹೆಸರನ್ನು ಚಿತ್ರದಲ್ಲಿ ಬಬ್ಬೂ ಯಾನೆ ಬಶೀರ್ ಖಾನ್ ಎಂದು ಬದಲಿಸಲಾಗಿದೆ' ಎಂದು ತಿಳಿಸಿದ್ದಾರೆಂದು thequint.com ವರದಿ ಮಾಡಿದೆ.

ಇದೇ ಸಂದರ್ಭ ನ್ಯೂಸ್ ಲಾಂಡ್ರಿಯ ಪರ್ತಕರ್ತ ಅಭಿನಂದನ್ ಸೇಖ್ರಿಯವರೂ ಚಿತ್ರವನ್ನು ವೀಕ್ಷಿಸಿದ್ದು, ದಾಳಿಕೋರನ ಧರ್ಮವನ್ನು ಬದಲಿಸಿಲ್ಲ ಎಂದು ಖಚಿತಪಡಿಸಿದ್ದಾರೆ ಎಂದು thequint.com ವರದಿ ತಿಳಿಸಿದೆ.

ಸತ್ಯ ಬಯಲಾಗುತ್ತಲೇ 'ಸ್ವರಾಜ್ಯ' ವೆಬ್ ಸೈಟ್ ತನ್ನ ಹೆಡ್ ಲೈನ್ ನ್ನು 'ಚಪಾಕ್ ವಿರುದ್ಧ ಆಕ್ರೋಶದ ನಂತರ ಪ್ರಮುಖ ಆರೋಪಿ  ನಯೀಮ್ ಖಾನ್ ಗೆ ಹಿಂದೂ ಹೆಸರಿಟ್ಟಿಲ್ಲ ಎಂದು ವರದಿಯಾಗಿದೆ" ಎಂದು ಬದಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News