ಜೆಎನ್‌ಯು ದಾಳಿ ವಿರೋಧಿ ಪ್ರತಿಭಟನೆಯಲ್ಲಿ ಮೊಳಗಿದ ‘ಹಮ್ ದೇಖೇಂಗೆ’ ಕವಿತೆ

Update: 2020-01-08 17:51 GMT

ಗಾಂಧೀನಗರ, ಜ.8: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ಅಹ್ಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಕವಿ ಫಾಯಿಝ್ ಅಹ್ಮದ್ ಫಾಯಿಝ್ ಅವರ ‘ಹಮ್ ದೇಖೇಂಗೆ’ ಎಂಬ ಜನಪ್ರಿಯ ಕವಿತೆಯನ್ನು ವಿದ್ಯಾರ್ಥಿಗಳು ಒಕ್ಕೊರಲಿನಿಂದ ಹಾಡಿರುವುದಾಗಿ ವರದಿಯಾಗಿದೆ.

ಹಮ್ ದೇಖೇಂಗೆ (ನಾವು ನೋಡಿಕೊಳ್ಳುತ್ತೇವೆ) ಎಂಬ ಉರ್ದು ಕವನ ಹಿಂದು ವಿರೋಧಿಯಾಗಿದೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 17ರಂದು ಐಐಟಿ ಕಾನ್ಪುರದ ವಿದ್ಯಾರ್ಥಿಗಳು ದಿಲ್ಲಿಯ ಜಾಮಿಯ ಮಿಲ್ಲಿಯಾ ವಿವಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ನಡೆಸಿದ್ದ ಜಾಥಾದ ಸಂದರ್ಭ ವಿದ್ಯಾರ್ಥಿಗಳು ಈ ಕವನವನ್ನು ವಾಚಿಸಿದ್ದರು.

 ಇದು ಹಿಂದೂ ವಿರೋಧಿಯಾಗಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸ್ಥೆಯು ತನಿಖಾ ಸಮಿತಿಯನ್ನು ರಚಿಸಿತ್ತು. ಐಐಎಂ ಅಹ್ಮದಾಬಾದ್‌ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಎರಾಲ್ ಡಿ’ಸೋಜ, ಸ್ವಾತಂತ್ರೋತ್ತರ ಭಾರತದ ಇತಿಹಾಸದಲ್ಲೇ ಇಂತಹ ಕೀಳುಮಟ್ಟದ ಘಟನೆ ನಡೆದಿಲ್ಲ. ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡನೀಯ ಎಂದು ಹೇಳಿದರು. ವಿವಿ ಎಂಬುದು ಸಹಿಷ್ಣುತೆ, ಸಂವಾದ ಮತ್ತು ಭಿನ್ನ ಅಭಿಪ್ರಾಯದ ವೇದಿಕೆಯಾಗಿದೆ. ಹಿಂಸಾಚಾರವು ವಿವಿಯ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News