ಶರಪೋವಾಗೆ ವೈಲ್ಡ್ ಕಾರ್ಡ್
ಮೆಲ್ಬೋರ್ನ್, ಜ.8: ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾಗೆ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ಗೆ ವೈಲ್ಡ್ ಕಾರ್ಡ್ ಲಭಿಸಿದೆ. ಇದೊಂದು ವಿಶೇಷವಾದುದು ಎಂದು ಬುಧವಾರ ವೈಲ್ಡ್ ಕಾರ್ಡ್ ಪಡೆದ ಬಳಿಕ ಶರಪೋವಾ ಪ್ರತಿಕ್ರಿಯಿಸಿದರು.
2008ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ 32ರ ಹರೆಯದ ಶರಪೋವಾ ಕಳೆದ ವರ್ಷವಿಡೀ ಗಾಯದ ಸಮಸ್ಯೆಯನ್ನು ಎದುರಿಸಿದ್ದರು. ಇದೀಗ ಅವರು 147ನೇ ರ್ಯಾಂಕಿನಲ್ಲಿದ್ದು, ಅವರಿಗೆ ಟೂರ್ನಿಗೆ ನೇರ ಅರ್ಹತೆ ಪಡೆಯುವ ಅವಕಾಶವಿರಲಿಲ್ಲ. ಈ ವಾರ ನಡೆದ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತು ಹೊರ ನಡೆದಿದ್ದರು. ರಶ್ಯದ ಖ್ಯಾತ ಆಟಗಾರ್ತಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ 16ನೇ ಬಾರಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. 2003ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದರು. ‘‘ನನಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಾಂಪಿಯನ್‌ಶಿಪ್ ಟ್ರೋಫಿ ಎತ್ತಿಹಿಡಿಯುವುದರಿಂದ ತೊಡಗಿ ಕೆಲವು ಕಠಿಣ ಫೈನಲ್ ಸಹಿತ ಹಲವು ಅದ್ಭುತ ಅನುಭವವಾಗಿದೆ. ಆಸ್ಟ್ರೇಲಿಯದಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದ್ದೇನೆ. ಮೆಲ್ಬೋರ್ನ್ ಪಾರ್ಕ್ ಮೈದಾನದಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಲಭಿಸಿದ್ದು ನನ್ನ ಪಾಲಿಗೆ ಭಾರೀ ವಿಶೇಷವಾಗಿದೆ’’ ಎಂದು ಕಳೆದ ವರ್ಷ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರೊಲಿನ್ ವೋಝ್ನಿಯಾಕಿಗೆ ಶಾಕ್ ನೀಡಿದ್ದ ಶರಪೋವಾ ಹೇಳಿದ್ದಾರೆ.