ಬೆಂಗಳೂರಿನಲ್ಲಿ ಭೀಕರ ಅಪಘಾತ: ಮಂಜೇಶ್ವರದ ಮೂವರು ಮೃತ್ಯು

Update: 2020-01-09 11:32 GMT

ಬೆಂಗಳೂರು, ಜ.9: ಧರ್ಮ ಕ್ಷೇತ್ರಕ್ಕೆ ಹೋಗಿ ವಾಪಸ್ಸು ಬರುತ್ತಿದ್ದ ವೇಳೆ, ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ(ಡಿವೈಡರ್)ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ಗುಡೇಮಾರನಹಳ್ಳಿ ಮೇಲ್ಸೇತುವೆ ಬಳಿ ಸಂಭವಿಸಿದೆ.

ಕಾಸರಗೋಡುವಿನ ಮಂಜೇಶ್ವರ ಹೊಸಂಗಡಿ ಬಳಿಯ ಬೆಜ್ಜ ನಿವಾಸಿಯೂ ಆಗಿರುವ ಖಾಸಗಿ ಬಸ್ ಚಾಲಕ ಕಿಶನ್(32), ಅಕ್ಷಯ್(30), ಅಂಗಡಿಪದವು ನಿವಾಸಿ ಮೋನಪ್ಪಮೇಸ್ತಿ(31) ಮೃತರು ಎಂದು ತಿಳಿದುಬಂದಿದ್ದು, ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಶಬರಿಮಲೆ ಯಾತ್ರೆ ಪೂರೈಸಿ ಗ್ರಾಮಗಳಿಗೆ ಮರಳಿದ್ದ ಎಲ್ಲ 9 ಮಂದಿ, ತಿರುಪತಿ ಕ್ಷೇತ್ರ ದರ್ಶನಕ್ಕೆ ಎರಡು ದಿನಗಳ ಹಿಂದೆ ತೆರಳಿ ಬುಧವಾರ ತಡರಾತ್ರಿ ಕಾರಿನಲ್ಲಿ ರಾತ್ರಿ 12ರ ವೇಳೆ ಮರಳುತ್ತಿದ್ದಾಗ ಬೆಂಗಳೂರು ಹಾಸನ ರಸ್ತೆಯ ಕುದೂರು ಬಳಿಯ ಗುಡೇಮಾರನಹಳ್ಳಿ ಮೇಲ್ಸುತುವೆ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ವಿದ್ಯುತ್ ಕಂಬಕ್ಕೆ ಕಾರು ಅಪ್ಪಳಿಸಿದೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಉಳಿದ 6 ಮಂದಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಕೂಡಲೇ ಸ್ಥಳಕ್ಕೆ ಧಾವಿಸಿದ ಕುದೂರು ಠಾಣಾ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಾಗಡಿ ಸರಕಾರಿಗೆ ರವಾನೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News