2019-20ನೇ ಸಾಲಿಗೆ ಭಾರತದ ಜಿಡಿಪಿ ಪ್ರಗತಿ ದರದ ಅಂದಾಜನ್ನು ಶೇ.5ಕ್ಕೆ ತಗ್ಗಿಸಿದ ವಿಶ್ವ ಬ್ಯಾಂಕ್

Update: 2020-01-09 13:42 GMT

ಹೊಸದಿಲ್ಲಿ,ಜ.9: ವಿಶ್ವ ಬ್ಯಾಂಕ್ 2019-20ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ದರದ ತನ್ನ ಅಂದಾಜನ್ನು ಶೇ.6ರಿಂದ ಶೇ.5ಕ್ಕೆ ಇಳಿಸಿದೆ,ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಶೇ.5.8ಕ್ಕೆ ಚೇತರಿಸಿಕೊಳ್ಳಲಿದೆ ಎಂದು ಅದು ಹೇಳಿದೆ. ವಿಶ್ವ ಬ್ಯಾಂಕಿನ ಮುನ್ನೋಟವು ಭಾರತ ಸರಕಾರ ಮತ್ತು ಆರ್‌ಬಿಐ ಅಂದಾಜುಗಳಿಗೆ ಅನುಗುಣವಾಗಿದೆ.

ಭಾರತದಲ್ಲಿ ಬ್ಯಾಂಕೇತರ ಹಣಕಾಸು ಕ್ಷೇತ್ರದಲ್ಲಿ ಸಾಲ ವಿತರಣೆಯನ್ನು ಕಟ್ಟುನಿಟ್ಟುಗೊಳಿಸಿರುವುದು ದೇಶಿಯ ಬೇಡಿಕೆಯನ್ನು ಗಮನಾರ್ಹವಾಗಿ ತಗ್ಗಿಸಿದೆ. ಸಾಕಷ್ಟು ಸಾಲದ ಅಲಭ್ಯತೆ ಮತ್ತು ಖಾಸಗಿ ಕ್ಷೇತ್ರದಿಂದ ಸಾಲಕ್ಕೆ ಹೆಚ್ಚಿನ ಬೇಡಿಕೆಯಿಲ್ಲದಿರುವುದು ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ ಎಂದು ವಿಶ್ವ ಬ್ಯಾಂಕ್ ಬುಧವಾರ ತನ್ನ ವರದಿಯಲ್ಲಿ ತಿಳಿಸಿದೆ.

2019ರಲ್ಲಿ ಭಾರತದ ಆರ್ಥಿಕ ಚಟುವಟಿಕೆಗಳು ಮಂದಗೊಂಡಿವೆ. ತಯಾರಿಕೆ ಮತ್ತು ಕೃಷಿ ಕ್ಷೇತ್ರ ಅತ್ಯಂತ ಹೆಚ್ಚಿನ ಹಿಂಜರಿತವನ್ನು ಕಂಡಿವೆ. ಆದರೆ ಸರಕಾರ ಸಂಬಂಧಿತ ಸೇವೆಗಳು ಮತ್ತು ಉಪಕ್ಷೇತ್ರಗಳು ಸಾರ್ವಜನಿಕ ವೆಚ್ಚದಿಂದಾಗಿ ಗಮನಾರ್ಹ ಬೆಂಬಲವನ್ನು ಪಡೆದಿವೆ ಎಂದು ಅದು ತಿಳಿಸಿದೆ.

ಮಂಗಳವಾರ ತಮ್ಮ ಮೊದಲ ಅಂದಾಜನ್ನು ಬಿಡುಗಡೆಗೊಳಿಸಿದ್ದ ಕೇಂದ್ರ ಸರಕಾರವು ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆ ದರ ಶೇ.5ರಷ್ಟಾಗಲಿದೆ ಮತ್ತು ಇದು 2008-09ರಿಂದ ಅತ್ಯಂತ ನಿಧಾನದ ವಾರ್ಷಿಕ ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ಹೇಳಿತ್ತು.

ಕಳೆದ ತಿಂಗಳು ಆರ್‌ಬಿಐ ಕೂಡ ತನ್ನ ವರದಿಯಲ್ಲಿ 2019-20ನೇ ಸಾಲಿಗೆ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಶೇ.5ಕ್ಕೆ ತಗ್ಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News