ಎಬಿವಿಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರ ಹಿಂಜರಿಕೆ: ಎನ್‌ಎಸ್‌ಯುಐ ಆರೋಪ

Update: 2020-01-09 17:26 GMT

ಅಹ್ಮದಾಬಾದ್: ಜ.9: ಜೆಎನ್‌ಯುವಿನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಮಂಗಳವಾರ ಅಹ್ಮದಾಬಾದ್‌ನಲ್ಲಿ ಎನ್‌ಎಸ್‌ಯುಐ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ನಡೆದ ಗಲಭೆ ಮತ್ತು ಹಲ್ಲೆ ಘಟನೆಯಲ್ಲಿ ಪೊಲೀಸರು ಎಬಿವಿಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಹಿಂಜರಿಯುತ್ತಿದ್ದಾರೆ ಎಂದು ಎನ್‌ಎಸ್‌ಯುಐ ಮಾಜಿ ಪ್ರಧಾನ ಕಾರ್ಯದರ್ಶಿ ನಿಖಿಲ್ ಸಾವನಿ ಆರೋಪಿಸಿದ್ದಾರೆ.

 ಪ್ರತಿಭಟನಾ ಜಾಥ ಅಹ್ಮದಾಬಾದ್‌ನ ಪಾಲ್ದಿ ಪ್ರದೇಶದಲ್ಲಿರುವ ಎಬಿವಿಪಿ ಕಚೇರಿಯೆದುರು ಸಾಗುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆದಿದ್ದು ತಲೆಗೆ ಏಟು ಬಿದ್ದಿದೆ ಎಂದು ಸಾವನಿ ಹೇಳಿದ್ದು ಈಗ ವಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ತಾನು ನೀಡಿರುವ ದೂರಿನಲ್ಲಿ ಭಾರತೀಯ ಜನತಾ ಯುವಮೋರ್ಛಾ(ಬಿಜೆವೈಎಂ)ದ ಗುಜರಾತ್ ಅಧ್ಯಕ್ಷ ರುತ್ವಿಜ್ ಪಟೇಲರ ಹೆಸರಿದ್ದು ಅದನ್ನು ತೆಗೆದುಹಾಕುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ. ಆದರೆ ತಾನು ನಿರಾಕರಿಸಿರುವುದಾಗಿ ಸಾವನಿ ಹೇಳಿದ್ದಾರೆ. ಪೊಲೀಸರು ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ ಪೊಲೀಸ್ ಆಯುಕ್ತರ ಕಚೇರಿಯೆದುರು ಧರಣಿ ಮುಷ್ಕರ ನಡೆಸುವುದಾಗಿ ಅವರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಪಟೇಲ್ ಹಾಗೂ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿನ್ಹ ವೇಲಾರ ಹೆಸರು ಸೇರಿಸಲು ಪೊಲೀಸರು ಒಪ್ಪುತ್ತಿಲ್ಲ. ಎಬಿವಿಪಿ ಕಚೇರಿಯ ಹೊರಗೆ ಸಾವನಿ ಮೇಲೆ ಹಲ್ಲೆ ನಡೆದ ಸಂದರ್ಭ ಪಟೇಲ್ ಹಾಗೂ ವೇಲಾ ಸ್ಥಳದಲ್ಲಿದ್ದರು ಎಂದು ಎನ್‌ಎಸ್‌ಯುಐ (ಕಾಂಗ್ರೆಸ್‌ನ ಯುವ ಘಟಕ) ಆರೋಪಿಸಿದೆ.

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡ ನೇತೃತ್ವದ ನಿಯೋಗ ಅಹ್ಮದಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಪಟೇಲ್ ಮತ್ತು ವೇಲಾರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸುವಂತೆ ಆಗ್ರಹಿಸಿದೆ. ಹಿಂಸಾಚಾರದಲ್ಲಿ ಸಾವನಿ ಸಹಿತ ಎಂಟು ಮಂದಿ ಗಾಯಗೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ‘ಗುರುತು ಪತ್ತೆಯಾಗದ’ ಕನಿಷ್ಟ 25 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News