ಇಂದು ಭಾರತ-ಶ್ರೀಲಂಕಾ 3ನೇ ಟ್ವೆಂಟಿ-20 ಪಂದ್ಯ

Update: 2020-01-09 17:36 GMT

ಪುಣೆ, ಜ.9: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ಪುಣೆಯಲ್ಲಿ ಶುಕ್ರವಾರ ನಡೆಯಲಿದ್ದು, ಕರ್ನಾಟಕದ ಮಧ್ಯಮ ಸರದಿಯ ದಾಂಡಿಗ ಮನೀಷ್ ಪಾಂಡೆ ಮತ್ತು ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಸರಣಿ ಗೆಲುವಿಗೆ ಭಾರತ ಅಂತಿಮ ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ಈ ಉದ್ದೇಶಕ್ಕಾಗಿ ಸಂಜು ಸ್ಯಾಮ್ಸನ್ ಮತ್ತು ಮನೀಷ್ ಪಾಂಡೆ ಅವರನ್ನು ಅಂತಿಮ ಹನ್ನೊಂದರಲ್ಲಿ ಸೇರಿಸುವ ಸಾಧ್ಯತೆ ಇದೆ. ಅನನುಭವಿ ಆಟಗಾರರನ್ನು ಒಳಗೊಂಡ ಶ್ರೀಲಂಕಾ ತಂಡ ಕಳೆದ ಪಂದ್ಯದಲ್ಲಿ ಸುಲಭವಾಗಿ ಶರಣಾಗಿತ್ತು.

ಇಬ್ಬರು ಆಟಗಾರರು ಅವಕಾಶಕ್ಕಾಗಿ ಹಲವು ಸಮಯಗಳಿಂದ ಎದುರು ನೋಡುತ್ತಿದ್ದಾರೆ. ವಿಶ್ವಕಪ್‌ಗೆ ಭಾರತದ ಬಲಿಷ್ಠ ರೂಪುಗೊಳ್ಳಬೇಕಾಗಿದೆ. ಪಾಂಡೆ ಕಳೆದ ಮೂರು ಸರಣಿಗಳಲ್ಲಿ ಒಂದು ಪಂದ್ಯವನ್ನು ಆಡಿದ್ದರು. ಸ್ಯಾಮ್ಸನ್ ಕಳೆದ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಆಯ್ಕೆಯಾಗಿ ಅಂದಿನಿಂದ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಬ್ಬರು ಆಟಗಾರರು ಇನ್ನಷ್ಟೇ ಸಾಮರ್ಥ್ಯದ ಪರೀಕ್ಷೆಗೊಳಪಡಬೇಕಾಗಿದೆ.

 ಹಿರಿಯ ವೇಗಿಗಳ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿಗೆ ಅವಕಾಶ ಸಿಕ್ಕಿದೆ. ಅವರು ದೊರೆತ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಇಬ್ಬರು ಕಳೆದ ಪಂದ್ಯದಲ್ಲಿ ಜೊತೆಯಾಗಿ ಐದು ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ.

ವಾಶಿಂಗ್ಟನ್ ಸುಂದರ್ ಅವರು ಗಾಯಾಳು ಹಾರ್ದಿಕ್ ಪಾಂಡ್ಯ ಬದಲಿಗೆ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಸುಂದರ್ ಅವರ ಪ್ರದರ್ಶನ ಚೆನ್ನಾಗಿದೆ. ಆಲ್‌ರೌಂಡರ್ ಶಿವಂ ದುಬೆಗೆ ಕಳೆದ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ.

  2ನೆ ಪಂದ್ಯದಲ್ಲಿನ ಗೆಲುವಿನ ಬಳಿಕ ಭಾರತ ತಂಡದ ಪ್ರದರ್ಶನವು ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆಯಾಗುತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಅಷ್ಟು ಮಾತ್ರವಲ್ಲ ಪ್ರಸಿದ್ಧ ಕೃಷ್ಣ ಸೇರಿದಂತೆ ಇನ್ನೂ ಹಲವರು ಟೀಮ್ ಇಂಡಿಯಾ ಸೇರ್ಪಡೆಯ ಬಗ್ಗೆ ಸುಳಿವು ನೀಡಿದ್ದಾರೆ.

ಶಿಖರ್ ಧವನ್ ಅವರು ಎರಡನೇ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಲೋಕೇಶ್ ರಾಹುಲ್ ಜೊತೆ ಪೈಪೋಟಿಯಲ್ಲಿದ್ದಾರೆ. ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿ ಮೊದಲ ಪಂದ್ಯದಲ್ಲಿ ದೊಡ್ಡ ಸಾಧನೆ ಮಾಡಲಿಲ್ಲ. ಅಂತಿಮ ಪಂದ್ಯದಲ್ಲಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

 ಠಾಕೂರ್ ಮತ್ತು ಸೈನಿ ಇಂದೋರ್‌ನಲ್ಲಿ ಮಿಂಚಿದ್ದರು, ಠಾಕೂರ್ ಡೆೆತ್ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸೈನಿ ಬ್ಯಾಟ್ಸ್ ಮನ್‌ಗಳನ್ನು ವೇಗ ಮತ್ತು ಬೌನ್ಸರ್ ಮೂಲಕ ಕಾಡಿದ್ದಾರೆ.

 ಶ್ರೀಲಂಕಾ ತಂಡದಲ್ಲಿ ಹಲವು ಮಂದಿ ಎಡಗೈ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರಿಗೆ ಭಾರತದ ಸ್ಪಿನ್ನರ್‌ಗಳು ಸವಾಲಾಗಲಿದ್ದಾರೆ. ಕುಲದೀಪ್ ಯಾದವ್(38ಕ್ಕೆ 2) ಮತ್ತು ವಾಶಿಂಗ್ಟನ್ ಸುಂದರ್(29ಕ್ಕೆ 1) ತಂಡದಲ್ಲಿ ಮುಂದಿನ ಪಂದ್ಯದಲ್ಲೂ ಅವಕಾಶ ಪಡೆಯುವುದನ್ನು ನಿರೀಕ್ಷಿಸಲಾಗಿದೆ. ಇದರಿಂದಾಗಿ ರವೀಂದ್ರ ಜಡೇಜ ಮತ್ತು ಯಜುವೆಂದ್ರ ಚಹಾಲ್ ತಂಡದಿಂದ ಹೊರಗುಳಿಯಬೇಕಾಗುತ್ತದೆ.

ಶ್ರೀಲಂಕಾ ತಂಡವು ತವರಿನಲ್ಲಿ ಭಾರತ ತಂಡಕ್ಕೆ ಕಠಿಣ ಸವಾಲು ನೀಡಬೇಕಾದರೆ ತಂಡವನ್ನು ಬಲಿಷ್ಠಗೊಳಿಸಬೇಕಾಗಿದೆ. ಆಲ್‌ರೌಂಡರ ಇಸುರು ಉದಾನೆ ತಂಡದ ಸೇವೆಗೆ ಲಭ್ಯರಿಲ್ಲ. ಇದು ಲಂಕಾ ತಂಡಕ್ಕೆ ಹಿನ್ನಡೆಯಾಗಿದೆ. ಶ್ರೀಲಂಕಾ ಕೆಲವು ಅನುಭವಿ ಬ್ಯಾಟ್ಸ್ ಮನ್‌ಗಳ ಮೂಲಕ ಅಂತಿಮ ಪಂದ್ಯದಲ್ಲಿ ಹೋರಾಟ ನಡೆಸಲು ಶಕ್ತವಾಗಿದೆ. ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ 16 ತಿಂಗಳ ಬಳಿಕ ಟ್ವೆಂಟಿ-20 ತಂಡಕ್ಕೆ ವಾಪಸಾಗಿದ್ದರೂ,ಅವರಿಗೆ ಎರಡನೇ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಅಂತಿಮ ಪಂದ್ಯದಲ್ಲಿ ಅವಕಾಶ ನಿರೀಕ್ಷಿಸಲಾಗಿದೆ.

► ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಶಿವಂ ದುಬೆ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್ ಮತ್ತು ಸಂಜು ಸ್ಯಾಮ್ಸನ್.

► ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫೆರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ದಾಸುನ್ ಶಾನಕಾ, ಕುಸಾಲ್ ಪೆರೆರಾ, ನಿರೋಶನ್ ಡಿಕ್ವೆಲ್ಲಾ, ಧನಂಜಯ ಡಿಸಿಲ್ವಾ, ಭನುಕಾ ರಾಜಪಕ್ಸೆ, ಒಷಾದಾ ಫೆರ್ನಾಂಡೊ, ಎಲ್.ಸಂಡಕನ್ ಮತ್ತು ಕಸುನ್ ರಜಿತಾ.

► ಆನ್-ಫೀಲ್ಡ್ ಅಂಪೈರ್‌ಗಳು: ವೀರೇಂದ್ರ ಶರ್ಮಾ, ನಿತಿನ್ ಮೆನನ್.

► ಟಿವಿ ಅಂಪೈರ್: ಸಿ.ಶಂಸುದ್ದೀನ್. ರಿಸರ್ವ್ ಅಂಪೈರ್: ಕೆ.ಶ್ರೀನಿವಾಸನ್

► ಪಂದ್ಯದ ರೆಫರಿ: ಡೇವಿಡ್ ಬೂನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News