ಜಮ್ಮುಕಾಶ್ಮೀರದಲ್ಲಿ ನಿರ್ಬಂಧ ಪ್ರಶ್ನಿಸಿ ಮನವಿ: ಶುಕ್ರವಾರ ತೀರ್ಪು
ಹೊಸದಿಲ್ಲಿ, ಜ. 9: ವಿಧಿ 370 ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ಹಿಂದಿನ ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿಸಲಾದ ನಿರ್ಬಂಧ ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಸೇರಿದಂತೆ ಹಲವರು ಸಲ್ಲಿಸಿದ ಮನವಿಗಳ ಗುಚ್ಛದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನೀಡಲಿದೆ.
ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಆರ್. ಸುಭಾಶ್ ರೆಡ್ಡಿ, ಬಿ.ಆರ್. ಗವಾಯಿ ಈ ಮನವಿಗಳ ಕುರಿತ ತೀರ್ಪನ್ನು ಕಳೆದ ವರ್ಷ ನವೆಂಬರ್ 27ರಂದು ಕಾದಿರಿಸಿತ್ತು. ವಿಧಿ 370 ರದ್ದುಗೊಳಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರಕಾರ ನವೆಂಬರ್ 21ರಂದು ಸಮರ್ಥಿಸಿಕೊಂಡಿತ್ತು. ಅಲ್ಲದೆ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಒಂದೇ ಒಂದು ಜೀವ ಹಾನಿ ಸಂಭವಿಸಿಲ್ಲ ಹಾಗೂ ಒಂದೇ ಒಂದು ಗುಂಡು ಹಾರಿಲ್ಲ ಎಂದು ಅದು ಹೇಳಿತ್ತು.
ಜಮ್ಮು ಹಾಗೂ ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಗುಲಾಂ ನಬಿ ಆಝಾದ್ ಅಲ್ಲದೆ, ಕಾಶ್ಮೀರಿ ಟೈಮ್ಸ್‌ನ ಕಾರ್ಯಕಾರಿ ಸಂಪಾದಕ ಅನಿರುದ್ಧ ಭಾಸಿನ್ ಹಾಗೂ ಇತರ ಕೆಲವರು ಮನವಿ ಸಲ್ಲಿಸಿದ್ದರು.