ಏಕದಿನ ಕ್ರಿಕೆಟ್‌ಗೆ ಧೋನಿ ಶೀಘ್ರವೇ ವಿದಾಯ: ರವಿ ಶಾಸ್ತ್ರಿ

Update: 2020-01-09 18:09 GMT

ಮುಂಬೈ, ಜ.9: ಟ್ವೆಂಟಿ-20 ಕ್ರಿಕೆಟ್‌ನತ್ತ ಹೆಚ್ಚು ಗಮನ ನೀಡುವ ಉದ್ದೇಶಕ್ಕಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್‌ನಿಂದ ಶೀಘ್ರವೇ ನಿವೃತ್ತರಾಗಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ತಿಳಿಸಿದ್ದಾರೆ. ‘‘ಐಸಿಸಿಯ ಎರಡು ವಿಶ್ವಕಪ್‌ಗಳನ್ನು ಜಯಿಸಿರುವ ತಂಡದ ನಾಯಕರಾಗಿದ್ದ ಧೋನಿ ಅವರೊಂದಿಗೆ ತಾನು ಮಾತುಕತೆ ನಡೆಸಿದ್ದೇನೆ. ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಿಂದ ಶೀಘ್ರವೇ ನಿವೃತ್ತರಾಗುವ ಎಲ್ಲ ಸಾಧ್ಯತೆ ಇದೆ’’ಎಂದರು. ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾಸ್ತ್ರಿ ಅವರು‘‘ಧೋನಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ತಡೆರಹಿತವಾಗಿ ಆಡಿದ್ದಾರೆ. ಅವರನ್ನು ನಾವು ಗೌರವಿಸಬೇಕಾಗಿದೆ’’ಎಂದರು.

 ‘‘ಧೋನಿ ಈ ವಯಸ್ಸಿನಲ್ಲೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಡುವತ್ತ ಒಲವು ಹೊಂದಿದ್ದಾರೆ. ಅವರು ಶೀಘ್ರದಲ್ಲೇ ಟ್ವೆಂಟಿ-20 ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ. ಐಪಿಎಲ್‌ನಲ್ಲಿ ಆಡುವ ಯೋಜನೆಯಲ್ಲಿದ್ದಾರೆ. ಅವರ ದೇಹ ಇದಕ್ಕೆ ಯಾವ ರೀತಿ ಹೊಂದಿಕೆಯಾಗುತ್ತದೆ ಎನ್ನುವುದು ಗೊತ್ತಿಲ್ಲ. 38ರ ಹರೆಯದ ಧೋನಿ ಐಪಿಎಲ್‌ನಲ್ಲಿ ಆಡುವುದು ಖಚಿತ. ಒಂದು ವೇಳೆ ಇದರಲ್ಲಿ ಯಶಸ್ವಿಯಾದರೆ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಲು ಟೀಮ್ ಇಂಡಿಯಾದ ಸೇವೆಗೆ ಲಭ್ಯರಿರುತ್ತಾರೆ’’ ಎಂದರು.ಧೋನಿ ಕೊನೆಯ ಬಾರಿ ಕಳೆದ ಜುಲೈನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡಿದ್ದರು. ಅರ್ಧಶತಕ ದಾಖಲಿಸಿ ರನೌಟಾಗಿ ಪೆವಿಲಿಯನ್ ಸೇರಿದ್ದರು. ‘‘ಟ್ವೆಂಟಿ-20 ವಿಶ್ವಕಪ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಅನುಭವ ಮತ್ತು ಹಿರಿತನವನ್ನು ಪರಿಗಣಿಸಲಾಗುವುದು. ಧೋನಿ ಆಡಲು ವಿಶ್ವಕಪ್‌ಗೆ ಲಭ್ಯರಾದರೆ 5-6ನೇ ಸರದಿಯಲ್ಲಿ ಆಡಲಿದ್ದಾರೆ’’ ಎಂದು ಶಾಸ್ತ್ರಿ ಮಾಹಿತಿ ನೀಡಿದರು. ಧೋನಿ 350 ಏಕದಿನ, 90 ಟೆಸ್ಟ್ ಮತ್ತು 98 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ವಿಕೆಟ್‌ನ ಹಿಂದುಗಡೆ 829 ಬಲಿ ಪಡೆದಿದ್ದಾರೆ.

 ವೃತ್ತಿ ಬದುಕಿನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಧೋನಿ ನಾಯಕರಾಗಿ 2007ರಲ್ಲಿ ಟ್ವೆಂಟಿ-20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದರು. ಐಸಿಸಿಯ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಪ್ರಸ್ತಾವನೆಯ ಬಗ್ಗೆ ಮಾತನಾಡಿದ ಶಾಸ್ತ್ರಿ ‘‘ಇದು ಅಸಂಬದ್ಧ’’ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News