ಗುಜರಾತ್: ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ; ತೀವ್ರಗೊಂಡ ಗ್ರಾಮಸ್ಥರ ಪ್ರತಿಭಟನೆ
ಅಹ್ಮದಾಬಾದ್: ಗುಜರಾತ್ ನ ಮೋದಸಾ ಎಂಬಲ್ಲಿನ ಸೈರಾ ಗ್ರಾಮದಲ್ಲಿ ಜನವರಿ 5ರಂದು ಆಲದ ಮರದಲ್ಲಿ 19 ವರ್ಷದ ದಲಿತ ಯುವತಿಯ ಶವ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದಂದಿನಿಂದ ನೂರಾರು ದಲಿತರು ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯ ಎದುರು ಧರಣಿ ನಡೆಸುತ್ತಿದ್ದು ಯುವತಿಯ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೆಂದು ಶಂಕಿಸಲಾಗಿದೆ.
ಯುವತಿ ಕಾಣೆಯಾದ ದಿನವಾದ ಜನವರಿ 1ರಂದೇ ಆಕೆಯ ಕುಟುಂಬ ಪೊಲೀಸ್ ದೂರು ನೀಡಲು ಠಾಣೆಗೆ ತೆರಳಿದ್ದರೂ ಎಫ್ಐಆರ್ ದಾಖಲಿಸಲು ನಿರಾಕರಿಸಿದ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸುವಂತೆಯೂ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಆಕೆಯ ಕಳೇಬರ ಪತ್ತೆಯಾದ ಎರಡು ದಿನಗಳ ನಂತರವೂ ಎಫ್ಐಆರ್ ದಾಖಲಿಸಲಾಗಿರಲಿಲ್ಲ ಎಂದು ಯುವತಿಯ ಸಂಬಂಧಿಕರೊಬ್ಬರು ಹೇಳಿದ್ದಾರೆ. ತನ್ನ ಸೋದರಿಯೊಂದಿಗೆ ಮೋದಸ ಎಂಬಲ್ಲಿಗೆ ಹೋಗಿದ್ದ ಯುವತಿ ವಾಪಸ್ ಬಂದಿರಲಿಲ್ಲ. ಬಿಮಲ್ ಭಾರ್ವಡ್ ಎಂಬ ವ್ಯಕ್ತಿ ಆಕೆಯನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿ ಕೊಂಡೊಯ್ದಿದ್ದಾಗಿ ಆಕೆಯ ಸೋದರಿ ಹೇಳಿದ್ದಾಳೆ. ಹತ್ತಿರದಲ್ಲಿಯೇ ಇದ್ದ ಸಹಕಾರಿ ಮಿಲ್ ಒಂದರ ಸಿಸಿಟಿವಿ ದೃಶ್ಯದಲ್ಲಿ ಯುವತಿಯ ಸೋದರಿ ಹೇಳಿದ್ದು ನಿಜವೆಂದು ಸಾಬೀತಾಗಿದೆ. ಕಾರು ಬಿಮಲ್ನ ತಂದೆಯ ಹೆಸರಿನಲ್ಲಿ ನೋಂದಣಿಯಾಗಿತ್ತು. ಆದರೆ ತನ್ನ ಕಾರನ್ನು ತನ್ನ ಮೂವರು ಸ್ನೇಹಿತರಾದ ದರ್ಶನ್ ಭಾರ್ವಡ್, ಸತೀಶ್ ಭಾರ್ವಡ್ ಹಾಗೂ ಜಿಗರ್ ಕೊಂಡು ಹೋಗಿದ್ದರೆಂದು ಬಿಮಲ್ ಹೇಳಿಕೊಂಡಿದ್ದಾನೆ.
ಜನವರಿ 3ರಂದು ಮೋದಸ ಠಾಣೆಯ ಇನ್ ಸ್ಪೆಕ್ಟರ್ ಎನ್ ಕೆ ರಾಬರಿ ಮಹಿಳೆಯ ಕುಟುಂಬವನ್ನು ಸಂಪರ್ಕಿಸಿ ಆಕೆ ತನ್ನದೇ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ ಹಾಗೂ ಮರಳಿ ಬರುತ್ತಾಳೆ ಎಂದಿದ್ದರು. ಆದರೆ ಮರುದಿನ ಆತ ತನ್ನ ವ್ಯಾಪ್ತಿಯಲ್ಲಿ ಈ ಪ್ರಕರಣ ಬರುವುದಿಲ್ಲವೆಂದು ಹೇಳಿ ಸಬಲ್ಪುರ್ ಠಾಣೆಗೆ ಹೋಗುವಂತೆ ಹೇಳಿದ್ದರು. ಜನವರಿ 5ರಂದು ಯುವತಿ ಶವವಾಗಿ ಪತ್ತೆಯಾಗಿದ್ದಳು. ಮರುದಿನ ಆಕೆಯ ಕುಟುಂಬ ಬಿಮಲ್ ಮತ್ತಾತನ ಮೂವರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ ಹೊರಿಸಿ ಪ್ರಕರಣ ದಾಖಲಿಸಿತ್ತು.