ಮಹಾರಾಷ್ಟ್ರ ಡಿಐಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಯುವತಿ ನಾಪತ್ತೆ: ದೂರು

Update: 2020-01-10 14:50 GMT
ಸಾಂದರ್ಭಿಕ ಚಿತ್ರ

ಮುಂಬೈ, ಜ.10: ಮಹಾರಾಷ್ಟ್ರದ ಡಿಐಜಿ ನಿಶಿಕಾಂತ್ ಮೋರೆ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದ ತನ್ನ 17 ವರ್ಷದ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಯುವತಿಯ ತಂದೆ ಹೇಳಿದ್ದಾರೆ.

ಸೋಮವಾರ ಕಾಲೇಜಿಗೆಂದು ತೆರಳಿದ್ದ ಮಗಳು ಸಂಜೆ ಮನೆಗೆ ಬಂದಾಗ ಕಾಲೇಜಿನಲ್ಲಿ ಕೆಲವರು ತನ್ನನ್ನು ಭೇಟಿಯಾಗಿ ಮೊಬೈಲ್ ನಂಬರ್ ಕೇಳಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾಳೆ. ಬಳಿಕ ತನ್ನ ಕೋಣೆಯಲ್ಲಿ ಮಲಗಿದ್ದ ಆಕೆ ಮರುದಿನ ಬೆಳಿಗ್ಗೆಯಿಂದ ಕಾಣೆಯಾಗಿದ್ದಾಳೆ. ಆಕೆಯ ಕೋಣೆಯಲ್ಲಿರುವ ಸೂಸೈಡ್ ಪತ್ರದಲ್ಲಿ ‘ಡಿಐಜಿಯ ಕಿರುಕುಳದಿಂದ ಸಾಕಾಗಿ ಹೋಗಿದ್ದು ಸಾಯುವುದೇ ಲೇಸು’ ಎಂದು ಬರೆದಿದ್ದಾಳೆ ಎಂದು ಕುಟುಂಬದವರು ಹೇಳಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಶ್ಯದಲ್ಲಿ ಯುವತಿ ರಾತ್ರಿ 11:30ರ ವೇಳೆಗೆ ಒಬ್ಬಂಟಿಯಾಗಿ ಮನೆಯಿಂದ ಹೊರಗೆ ಹೋಗಿರುವುದು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅವರಿಗೆ ಮನಸ್ಸಿದ್ದರೆ ಮಗಳನ್ನು ತಕ್ಷಣ ಪತ್ತೆಹಚ್ಚಬಹುದು. ಆದರೆ ಅವರು ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ ಡಿಐಜಿ ಮತ್ತಿತರ ಉನ್ನತಾಧಿಕಾರಿಗಳ ಭಯ ಅವರಲ್ಲಿದೆ. ಮುಖ್ಯಮಂತ್ರಿಗಳು ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕು ಎಂದು ಯುವತಿಯ ತಂದೆ ಒತ್ತಾಯಿಸಿದ್ದಾರೆ.

ಯುವತಿ ನೀಡಿದ ದೂರಿನ ಆಧಾರದಲ್ಲಿ 2018ರ ಡಿಸೆಂಬರ್ 26ರಂದು ಡಿಐಜಿ ನಿಶಿಕಾಂತ್ ಮೋರೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಜನವರಿ 9ರಂದು (ಗುರುವಾರ) ಅವರನ್ನು ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News