ಕರಾಳ ಕಲೆಗಳ ಸಾಕಾರಮೂರ್ತಿ: ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ತಿರುಗೇಟು ನೀಡಿದ ಭಾರತ

Update: 2020-01-10 15:17 GMT
file photo

ನ್ಯೂಯಾರ್ಕ್, ಜ. 10: ಪಾಕಿಸ್ತಾನ ಸುಳ್ಳುಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಅದು ತನ್ನ ಕಾಯಿಲೆಯನ್ನು ತಾನೇ ಗುಣಪಡಿಸಿಕೊಳ್ಳಬೇಕು ಎಂದು ಭಾರತ ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೇಳಿದೆ.

 ‘‘ಪಾಕಿಸ್ತಾನವು ಕರಾಳ ಕಲೆಗಳನ್ನು ಮೈದುಂಬಿಕೊಂಡಿದೆ. ನಿಮ್ಮ ದುರುದ್ದೇಶಗಳನ್ನು ನಂಬುವವರು ಇಲ್ಲಿ ಯಾರೂ ಇಲ್ಲ’’ ಎಂದು ಪಾಕಿಸ್ತಾನಕ್ಕೆ ಕಟು ಸಂದೇಶವೊಂದರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದರು. ಅದೇ ವೇಳೆ, ಪಾಕಿಸ್ತಾನದಿಂದ ಉದ್ಭವಿಸುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸಲು ವಿಫಲವಾಗಿರುವುದಕ್ಕಾಗಿ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಟೀಕಿಸಿದರು. ‘‘ಭದ್ರತಾ ಮಂಡಳಿಯು ಅಸ್ಮಿತೆ ಮತ್ತು ಕಾನೂನುಬದ್ಧತೆ ಹಾಗೂ ಪ್ರಸ್ತುತತೆ ಮತ್ತು ನಿರ್ವಹಣೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎನ್ನುವುದು ದಿನೇ ದಿನೇ ಗೋಚರಿಸುತ್ತಿದೆ. ಭಯೋತ್ಪಾದಕ ಜಾಲಗಳ ಜಾಗತೀಕರಣ, ಹೊಸ ತಂತ್ರಜ್ಞಾನಗಳು ಅಸ್ತ್ರಗಳಂತೆ ಬಳಕೆಯಾಗುತ್ತಿರುವುದು, ಬುಡಮೇಲು ಕೃತ್ಯಗಳಲ್ಲಿ ತೊಡಗಿರುವವರನ್ನು ನಿಗ್ರಹಿಸುವಲ್ಲಿ ಅಸಮರ್ಥವಾಗಿರುವುದು ಭದ್ರತಾ ಮಂಡಳಿಯ ಕೊರತೆಗಳನ್ನು ಬಿಂಬಿಸುತ್ತಿದೆ’’ ಎಂದು ಅಕ್ಬರುದ್ದೀನ್ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಕರಾಳ ಕಲೆಗಳನ್ನೇ ಮೈದುಂಬಿಸಿಕೊಂಡಿರುವ ನಿಯೋಗವೊಂದು ಇಂದು ಬೆಳಗ್ಗೆ ಸುಳ್ಳುಗಳನ್ನು ಹೇಳುವ ಮೂಲಕ ಮತ್ತೊಮ್ಮೆ ತನ್ನ ನೈಪುಣ್ಯವನ್ನು ತೋರಿಸಿದೆ. ಈ ಸುಳ್ಳುಗಳನ್ನು ನಾವು ತಿರಸ್ಕಾರದಿಂದ ತಳ್ಳಿಹಾಕುತ್ತೇವೆ. ಪಾಕಿಸ್ತಾನಕ್ಕೆ ನನ್ನ ಸರಳ ಸಲಹೆಯೆಂದರೆ, ಈಗಾಗಲೇ ತಡವಾಗಿದ್ದರೂ ಪರವಾಗಿಲ್ಲ, ನಿಮ್ಮ ರೋಗವನ್ನು ಗುಣಪಡಿಸಿಕೊಳ್ಳಿ. ನಿಮ್ಮ ನಕಲಿ ಸುದ್ದಿಗಳನ್ನು ಕೇಳುವವರು ಇಲ್ಲಿ ಯಾರೂ ಇಲ್ಲ’’ ಎಂದು ಅಕ್ಬರುದ್ದೀನ್ ನುಡಿದರು.

ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಮುನೀರ್ ಅಕ್ರಮ್ ಆಡಿದ ಮಾತುಗಳಿಗೆ ಭಾರತೀಯ ರಾಯಭಾರಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘‘ಜಮ್ಮು ಮತ್ತು ಕಾಶ್ಮೀರದ ಮೇಲೆ ಏಕಪಕ್ಷೀಯ ಕ್ರಮಗಳನ್ನು ಭಾರತ ಹೇರಿದೆ ಹಾಗೂ ಅಲ್ಲಿ ಸಾಮಾನ್ಯ ಪರಿಸ್ಥಿತಿ ಮರಳಿದೆ ಎಂಬುದಾಗಿ ಭಾರತ ಸುಳ್ಳು ಹೇಳುತ್ತಿದೆ’’ ಎಂದು ಪಾಕ್ ಪ್ರತಿನಿಧಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News