×
Ad

ಇರಾನ್ ಕ್ಷಿಪಣಿಗಳಿಂದ ವಿಮಾನ ಪತನ ?

Update: 2020-01-10 20:50 IST
ಫೈಲ್ ಚಿತ್ರ

ಒಟ್ಟಾವ (ಕೆನಡ), ಜ. 10: ಟೆಹರಾನ್‌ನಿಂದ ಹಾರಾಟ ಆರಂಭಿಸಿದ ಯುಕ್ರೇನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವನ್ನು ಇರಾನ್‌ನ ಕ್ಷಿಪಣಿಗಳು ಹೊಡೆದುರುಳಿಸಿವೆ ಎನ್ನುವುದನ್ನು ಹಲವಾರು ಗುಪ್ತಚರ ಮೂಲಗಳು ಸೂಚಿಸಿವೆ ಎಂದು ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಗುರುವಾರ ಹೇಳಿದ್ದಾರೆ.

ಬುಧವಾರ ನಡೆದ ಅಪಘಾತದಲ್ಲಿ 63 ಕೆನಡಿಯನ್ನರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 176 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

  ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಚಿತ್ರಗಳು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳೇ ಯುಕ್ರೇನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ವಿಮಾನ ಪಿಎಸ್752ನ್ನು ಹೊಡೆದುರುಳಿಸಿರುವ ಸಾಧ್ಯತೆಗಳತ್ತ ಬೆಟ್ಟು ಮಾಡಿವೆ. ವಿಮಾನವು ಬೆಂಕಿಯುಂಡೆಯಾಗಿ ನೆಲಕ್ಕೆ ಬೀಳುವುದನ್ನು ಚಿತ್ರಗಳು ತೋರಿಸಿವೆ.

ವಿಮಾನಕ್ಕೆ ಇರಾನ್‌ನ ಕ್ಷಿಪಣಿಯೊಂದು ಬಡಿದಿರುವಂತೆ ಕಂಡು ಬಂದಿದೆ ಎಂದು ಮಿತ್ರದೇಶಗಳು ನೀಡಿದ ಮಾಹಿತಿ ಹಾಗೂ ಕೆನಡದ ಸ್ವಂತ ಗುಪ್ತಚರ ಮಾಹಿತಿಗಳನ್ನು ಉಲ್ಲೇಖಿಸಿ ಕೆನಡ ಪ್ರಧಾನಿ ಹೇಳಿದ್ದಾರೆ.

‘‘ಇದು ಉದ್ದೇಶಪೂರ್ವಕವಾಗಿಲ್ಲದಿರಬಹುದು ಎನ್ನುವುದು ನಮಗೆ ಗೊತ್ತು. ಕೆನಡಿಯನ್ನರಲ್ಲಿ ಪ್ರಶ್ನೆಗಳಿವೆ. ಅವರಿಗೆ ಉತ್ತರಗಳು ಬೇಕು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರೂಡೊ ನುಡಿದರು.

ನಿರಾಕರಿಸಿದ ಇರಾನ್

ಟೆಹರಾನ್, ಜ. 10: ವಿಮಾನಕ್ಕೆ ಕ್ಷಿಪಣಿ ಬಡಿದಿದೆ ಎನ್ನುವ ವಾದದಲ್ಲಿ ಅರ್ಥವಿಲ್ಲ, ಹಲವಾರು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ವಿಮಾನಗಳು ಸರಿಸುಮಾರು ಇದೇ ವಾಯುಪ್ರದೇಶವನ್ನು ಅಂದು ಬಳಸಿದ್ದವು ಎಂದು ಇರಾನ್ ಹೇಳಿದೆ.

ನೀವು ಹೊಂದಿರುವ ಮಾಹಿತಿಯನ್ನು ಇರಾನ್ ತನಿಖಾಧಿಕಾರಿಗಳಿಗೆ ನೀಡಿ ಎಂದು ಬಳಿಕ ಇರಾನ್ ಕೆನಡಕ್ಕೆ ಸೂಚಿಸಿದೆ.

ತನಿಖೆಯಲ್ಲಿ ವಿಶ್ವಸಂಸ್ಥೆಯ ಬೆಂಬಲ ಕೋರಿದ ಯುಕ್ರೇನ್: 45 ತನಿಖಾ ಸಿಬ್ಬಂದಿ ಟೆಹರಾನ್‌ಗೆ

ಯುಕ್ರೇನ್ ಏರ್‌ಲೈನ್ಸ್ ವಿಮಾನ ಪತನದ ಬಗ್ಗೆ ವಿಸ್ತೃತ ತನಿಖೆಗಾಗಿ ಯುಕ್ರೇನ್ ವಿಶ್ವಸಂಸ್ಥೆಯ ಬೆಂಬಲವನ್ನು ಕೋರಿದೆ ಹಾಗೂ ಇರಾನ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಭಾಗವಹಿಸುವುದಕ್ಕಾಗಿ ಟೆಹರಾನ್‌ಗೆ 45 ತನಿಖಾ ಸಿಬ್ಬಂದಿಯನ್ನು ಕಳುಹಿಸಿದೆ.

‘‘ದುರಂತದ ಬಗ್ಗೆ ಪಾರದರ್ಶಕ ಮತ್ತು ವಸ್ತುನಿಷ್ಠ ತನಿಖೆಯಾಗಲು ಸಹಾಯ ಮಾಡುವ ಮಾಹಿತಿಯನ್ನು ಯಾವುದೇ ದೇಶ ಹೊಂದಿದ್ದರೆ, ಅದನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ ಹಾಗೂ ಹೆಚ್ಚಿನ ತಪಾಸಣೆಯಲ್ಲಿ ಸಹಕಾರ ನೀಡಲಿದ್ದೇವೆ’’ ಎಂದು ಯುಕ್ರೇನ್ ಅಧ್ಯಕ್ಷರ ಕಚೇರಿ ನೀಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News