ಶಾಹೀನ್‌ಭಾಗ್‌ನಲ್ಲಿ ಸಿಎಎ ಪ್ರತಿಭಟನಕಾರರ ತೆರವಿಗೆ ದಿಲ್ಲಿ ಹೈಕೋರ್ಟ್ ನಕಾರ

Update: 2020-01-10 15:52 GMT
ಫೈಲ್ ಚಿತ್ರ

ಹೊಸದಿಲ್ಲಿ,ಜ.10: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಿಲ್ಲಿಯ ಶಾಹೀನ್‌ಭಾಗ್‌ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ತೆರವುಗಳಿಸುವಂತೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾದ ಮನವಿಯನ್ನು ವಿಚಾರಣೆಗೆ ಸ್ವೀಕರಿಸಲು ದಿಲ್ಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಶಾಹೀನ್‌ ಭಾಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಹಾಗೂ ವಾಹನ ಸಂಚಾರ ದಟ್ಟಣೆಯುಂಟಾಗುತ್ತಿದೆಯೆಂದು ಅರ್ಜಿದಾರರಾದ ತುಷಾರ್ ಸಹದೇವ್ ಹಾಗೂ ರಮಣ್ ಕಾಲ್ರಾ ದೂರಿದ್ದರು.

ಪ್ರತಿಭಟನೆಯಿಂದಾಗಿ ಶಾಹೀನ್‌ಭಾಗ್‌ ‌ನ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳು ನಿರ್ಬಂಧಿಸಲ್ಪಟ್ಟಿದ್ದು, ವಾಹನಗಳನ್ನು ಡಿಎನ್‌ಡಿ ಫ್ಲೈವೇ ಕಡೆಗೆ ತಿರುಗಿಸಲಾಗುತ್ತಿದೆ. ಇದರಿಂದಾಗಿ ದಿಲ್ಲಿಯಿಂದ ಉತ್ತರಪ್ರದೇಶ, ದಿಲ್ಲಿಯಿಂದ ಉತ್ತರಾಖಂಡ, ದಿಲ್ಲಿಯಿಂದ ನೊಯ್ಡಿ ಆಸ್ಪತ್ರೆಗಳು, ಅಶ್ರಮ ಹಾಗೂ ಬದರ್‌ಪುರಗಳಿಗೆ ತೆರಳುವ ಮಾರ್ಗಗಳಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ ಎಂದು ಅವರು ದಿಲ್ಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ನೇತೃತ್ವ ನ್ಯಾಯಪೀಠಕ್ಕೆ ಸಲ್ಲಿಸಿದ್ದ ಕೈಬರಹದ ಅರ್ಜಿಯಲ್ಲಿ ಆಪಾದಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಪ್ರತಿಭಟನಕಾರರು ತಡೆಬೇಲಿಗಳನ್ನು ಹಾಗೂ ಭಾರೀ ಗಾತ್ರದ ಕಲ್ಲುಗಳನ್ನು ಇರಿಸಿದ್ದು, ಪಾದಾಚಾರಿಗಳು ಸಂಚರಿಸಲು ಅವಕಾಶ ನೀಡುತ್ತಿಲ್ಲವೆಂದು ಅರ್ಜಿಯಲ್ಲಿ ದೂರಲಾಗಿತ್ತು.

ಈ ಪ್ರತಿಭಟನೆಗಳನ್ನು ಯಾವುದೇ ಸಾರ್ವಜನಿಕ ಅಸ್ತಿಗೆ ಹಾನಿ ಮಾಡದೆ, ಅಧಿಕೃತ ಪ್ರತಿಭಟನಾ ಪ್ರದೇಶಗಳಲ್ಲಿ ನಡೆಸಬೇಕು ಹಾಗೂ ರಸ್ತೆತಡೆ ನಿವಾರಿಸಿ, ಸಂಚಾರ ಸುಗಮಗೊಳಿಸುವಂತೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು.

 ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಶಾಹೀನ್‌ಭಾಗ್ ಹಾಗೂ ಜಾಮಿಯಾ ಮಿಲಿಯಾ ವಿವಿ ಬಳಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News