×
Ad

ಇರಾನ್ ವಿರುದ್ಧ ಸೇನಾ ಕ್ರಮಗಳನ್ನು ತೆಗೆದುಕೊಳ್ಳುವ ಟ್ರಂಪ್ ಅಧಿಕಾರಕ್ಕೆ ಕತ್ತರಿ

Update: 2020-01-10 21:31 IST

ವಾಶಿಂಗ್ಟನ್, ಜ. 10: ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಾಮರ್ಥ್ಯಕ್ಕೆ ಕಡಿವಾಣ ಹಾಕುವ ಮಸೂದೆಯೊಂದನ್ನು ಅಮೆರಿಕದ ಸಂಸದರು ಗುರುವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕರಿಸಿದ್ದಾರೆ.

ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಸಾವಿಗೆ ಕಾರಣವಾದ ಅಮೆರಿಕದ ವಾಯು ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳಿಂದಾಗಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿರುವ ಹಾಗೂ ಎರಡು ದೇಶಗಳ ನಡುವೆ ಯುದ್ಧ ಸ್ಫೋಟಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಸದರು ಈ ನಿರ್ಣಯವನ್ನು ಮಂಡಿಸಿದ್ದರು.

ಮಸೂದೆಯ ಮೇಲಿನ ಮತದಾನವು ಬಹುತೇಕ ಪಕ್ಷಾಧಾರಿತವಾಗಿಯೇ ನಡೆಯಿತು. ಮಸೂದೆಯ ಪರವಾಗಿ 224 ಮತಗಳು ಬಿದ್ದರೆ ವಿರುದ್ಧವಾಗಿ 194 ಮತಗಳು ಬಿದ್ದವು. ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಮೂವರು ಸಂಸದರು ನಿರ್ಣಯದ ಪರವಾಗಿ ಮತ ಹಾಕಿದರು.

ಅಮೆರಿಕ ಸಂಸತ್ತು ಕಾಂಗ್ರೆಸ್‌ನ ಅನುಮೋದನೆ ಪಡೆಯದೆ ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧ ಯಾವುದೇ ಸೇನಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಿರ್ಣಯ ನಿಷೇಧಿಸಿದೆ.

ಮಧ್ಯಪ್ರಾಚ್ಯದಲ್ಲಿ ಕೊನೆಯಿರದ ಇನ್ನೊಂದು ಯುದ್ಧ ತಪ್ಪು ನಿರ್ಧಾರ

 ಇರಾನ್ ವಿರುದ್ಧ ಸೇನಾ ಕ್ರಮಗಳನ್ನು ತೆಗೆದುಕೊಳ್ಳದಂತೆ ಡೊನಾಲ್ಡ್ ಟ್ರಂಪ್‌ರನ್ನು ನಿರ್ಬಂಧಿಸುವ ನಿರ್ಣಯವನ್ನು ಬೆಂಬಲಿಸಿರುವ ರಿಪಬ್ಲಿಕನ್ ಸಂಸದ ಮ್ಯಾಟ್ ಗೇಟ್ಝ್, ಟ್ರಂಪ್‌ರ ಕಟ್ಟಾ ಬೆಂಬಲಿಗರ ಪೈಕಿ ಒಬ್ಬರು.

ಸದನದಲ್ಲಿ ಮಾತನಾಡಿದ ಅವರು, ಈ ನಿರ್ಣಯವು ಟ್ರಂಪ್‌ರನ್ನು ಟೀಕಿಸುವುದಿಲ್ಲ, ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಕೊನೆಯಿರದ ಯುದ್ಧದಲ್ಲಿ ತೊಡಗುವುದು ತಪ್ಪು ನಿರ್ಧಾರ ಎಂದಷ್ಟೇ ಹೇಳುತ್ತದೆ ಎಂದು ಹೇಳಿದರು.

‘‘ನಮ್ಮ ಸಶಸ್ತ್ರ ಪಡೆಗಳ ಸದಸ್ಯರಿಗೆ ಈ ಯುದ್ಧಗಳಲ್ಲಿ ಹೋರಾಡಿ, ಸಾಯುವ ಧೈರ್ಯ ಇದ್ದರೆ, ಕಾಂಗ್ರೆಸ್ಸಿಗರಾಗಿ ನಮಗೂ ಅವರ ಪರವಾಗಿ ಅಥವಾ ವಿರುದ್ಧವಾಗಿ ಮತ ಹಾಕುವ ಧೈರ್ಯ ಇರಬೇಕು’’ ಎಂದು ಗೇಟ್ಝ್ ನುಡಿದರು.

ನಾನು ಯಾರೊಂದಿಗೂ ಸಮಾಲೋಚಿಸಬೇಕಾಗಿಲ್ಲ: ಟ್ರಂಪ್

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿರುವ ನಿರ್ಣಯಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಾಳಿಗಳನ್ನು ನಡೆಸಲು ನನಗೆ ಯಾರದೇ ಆಶೀರ್ವಾದ ಬೇಕಾಗಿಲ್ಲ ಎಂದು ಹೇಳಿದ್ದಾರೆ ಹಾಗೂ ಯುದ್ಧ ನಡೆಸುವ ವಿಚಾರದಲ್ಲಿ ಸಂಸತ್ತಿನೊಂದಿಗೆ ಸಮಾಲೋಚಿಸಬೇಕು ಎಂದು ಹೇಳುವ ಹಾಲಿ ಕಾನೂನುಗಳ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿದ್ದಾರೆ.

ಇರಾನ್ ವಿರುದ್ಧ ಹೆಚ್ಚಿನ ಸೇನಾ ಕ್ರಮಗಳಿಗಾಗಿ ಕಾಂಗ್ರೆಸ್‌ನೊಂದಿಗೆ ಸಮಾಲೋಚನೆ ನಡೆಸುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘‘ನಾನು ಯಾರೊಂದಿಗೂ ಸಮಾಲೋಚಿಸಬೇಕಾಗಿಲ್ಲ’’ ಎಂದರು.

‘‘ಹೀಗೆ ಮಾಡುವುದು ಸಾಧ್ಯವಿಲ್ಲ. ಯಾಕೆಂದರೆ ಕೆಲವು ಸಲ ನಾವು ಮಿಂಚಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’’ ಎಂದು ಟ್ರಂಪ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News