ಮೋದಿಯ ಬಜೆಟ್‌ಪೂರ್ವ ಸಭೆ ಸೂಪರ್ ಶ್ರೀಮಂತರಿಗೆ ಮೀಸಲು: ರಾಹುಲ್ ಟೀಕೆ
ಹೊಸದಿಲ್ಲಿ, ಜ.10: ಪ್ರಧಾನಿ ಮೋದಿಯ ಅತ್ಯಂತ ‘ವ್ಯಾಪಕ’ ಬಜೆಟ್ ಸಮಾಲೋಚನೆ ಕೇವಲ ಆಪ್ತ ಬಂಡವಾಳಗಾರರು ಹಾಗೂ ಸೂಪರ್ ಶ್ರೀಮಂತರಿಗೆ ಮೀಸಲಾಗಿದೆ. ದೇಶದ ರೈತರು, ವಿದ್ಯಾರ್ಥಿಗಳು, ಯುವಜನತೆ, ಮಹಿಳೆ, ಸರಕಾರಿ ಅಥವಾ ಸಾರ್ವಜನಿಕ ಕ್ಷೇತ್ರದ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು ಅಥವಾ ತೆರಿಗೆ ಪಾವತಿಸುವ ಮಧ್ಯಮ ವರ್ಗದವರು ಭಾಗವಹಿಸುವ ಬಗ್ಗೆ ಅವರಿಗೆ ಆಸಕ್ತಿಯಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ವರ್ಷದ ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ. ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯ ಆಪ್ತ ಬಂಡವಾಳಗಾರ ಮಿತ್ರರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಏರಿಂಡಿಯಾ, ಭಾರತ್ ಪೆಟ್ರೋಲಿಯಂ ಮುಂತಾದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದಿದ್ದಾರೆ. ಸೋಮವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ಮುಕೇಶ್ ಅಂಬಾನಿ, ರತನ್ ಟಾಟ, ಆನಂದ್ ಮಹೀಂದ್ರಾರಂತಹ ಪ್ರಮುಖ ಉದ್ಯಮಿಗಳು ಪಾಲ್ಗೊಂಡಿದ್ದರು. ಗುರುವಾರ ನೀತಿ ಆಯೋಗದ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಸಚಿವರು ಪಾಲ್ಗೊಂಡಿದ್ದರು. ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೈರು ಹಾಜರಾಗಿದ್ದರು.