‘ಹರ್ ಘರ್ ನಳ್ ಸೆ ಜಲ್’ ನಲ್ಲಿ ನೀರೆಯರಿಗೆ ಆದ್ಯತೆ: ಜಲಸಮಿತಿಯಲ್ಲಿ ಶೇ.50ರಷ್ಟು ಮಹಿಳಾ ಪ್ರಾತಿನಿಧ್ಯ
ಹೊಸದಿಲ್ಲಿ,ಜ.10: ನೀರಿನಗುಣಮಟ್ಟ ಪರೀಕ್ಷೆಯಿಂದ ಹಿಡಿದು, ಕೈಪಂಪ್‌ಗಳ ರಿಪೇರಿ ಮತ್ತು ಮುರಿದ ನಳ್ಳಿಗಳನ್ನು ಸರಿಪಡಿಸುವವರೆಗೆ ಗ್ರಾಮೀಣ ಭಾರತದ ಮಹಿಳೆಯರು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ‘ಹರ್ ಘರ್ ನಳ್ ಸೆ ಜಲ್’ ಯೋಜನೆಯಡಿ ನೀರು ಪೂರೈಕೆಯ ಮೂಲ ಸೌಕರ್ಯಗಳ ಜಾರಿ ಹಾಗೂ ನಿರ್ವಹಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ.
ಈ ಯೋಜನೆಯು, 2024ರೊಳಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಳ್ಳಿ ನೀರು ಪೂರೈಸುವ ಗುರಿಯನ್ನು ಹೊಂದಿದೆ.‘ಹರ್ ಘರ್ ಸೆ ನಳ್’ ಯೋಜನೆಯಡಿ, ಗ್ರಾಮಪಂಚಾಯತ್‌ಗಳು ರಚಿಸುವ ಜಲಸಮಿತಿಯಲ್ಲಿ ಶೇ. 50 ಮಂದಿ ಮಹಿಳಾ ಸದಸ್ಯರಿರುವುದು ಕಡ್ಡಾಯವಾಗಿದೆ. ಜಲಸಮಿತಿಯು ಪ್ರತಿ ಗ್ರಾಮಕ್ಕೂ ಅಗತ್ಯವಿರುವ ಮೂಲಸೌಕರ್ಯಗಳನ್ನು ನಿರ್ಧರಿಸಲಿದೆ ಮಾತ್ರವಲ್ಲದೆ, ನಳ್ಳಿ ನೀರು ಬಳಕೆಗಾಗಿ ನಿವಾಸಿಗಳು ಪಾವತಿಸಬೇಕಾದ ದರವನ್ನು ಕೂಡಾ ನಿರ್ಧರಿಸಲಿವೆ.
ನಳ್ಳಿ ನೀರು ಪೂರೈಕೆ ಯೋಜನೆ ಅನುಷ್ಠಾನಗೊಂಡ ಪ್ರತಿಯೊಂದು ಗ್ರಾಮದಲ್ಲಿಯೂ ಮಹಿಳೆಯರಿಗೆ ಕಲ್ಲುಗಾರೆ ಕೆಲಸ, ವಿದ್ಯುತ್ ಹಾಗೂ ಮೋಟಾರ್ ಮೆಕ್ಯಾನಿಕ್‌ನಲ್ಲಿ ತರಬೇತಿ ಕೂಡಾ ನೀಡಲಾಗುವುದು. ‘ಹರ್ ಘರ್ ನಳ್ ಸೆ ಜಲ್’ ಯೋಜನೆಯ ಜಾರಿಗಾಗಿ ಪ್ಲಂಬರ್‌ಗಳು, ಇಲೆಕ್ಟ್ರಿಶಿಯನ್‌ಗಳು, ಗಾರೆಕೆಲಸದವರು ಹಾಗೂ ಮೋಟಾರ್ ಮೆಕ್ಯಾನಿಕ್ ತರಬೇತಿಗಾಗಿ ಕೇಂದ್ರ ಜಲಶಕ್ತಿ ಸಚಿವಾಲಯವು ಈಗಾಗಲೇ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಕೇಂದ್ರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಪ್ರಸಕ್ತ ಈ ಯೋಜನೆಗಾಗಿ 15 ಸಾವಿರ ಗ್ರಾಮಸ್ಥರು ತರಬೇತಿ ಪಡೆಯುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲ ಸಮಿತಿಯಲ್ಲಿ ಪರಿಶಿಷ್ಟಜಾತಿ/ಪಂಗಡಗಳಿಗೆ ಶೇ.25ರಷ್ಟು ಪ್ರಾತಿನಿಧ್ಯ ನೀಡಲಾಗುವುದು. ನೀರು ಪೂರೈಕೆ ಮೂಲಸೌಕರ್ಯದ ಬಂಡವಾಳ ವೆಚ್ಚದ ಶೇ.10ರಷ್ಟನ್ನು ಗ್ರಾಮಸ್ಥರು ಭರಿಸಬೇಕಾಗುತ್ತದೆ. ಆದರೆ ಎಸ್,ಎಸ್‌ಟಿ ಸಮದಾಯಕ್ಕೆ ಅದನ್ನು ಶೇ.5ಕ್ಕೆ ನಿಗದಿಪಡಿಸಲಾಗುತ್ತದೆ.