ಮಲೇಶ್ಯ ಮಾಸ್ಟ ರ್ಸ್: ಸಿಂಧು, ಸೆನಾ ಸವಾಲು ಅಂತ್ಯ

Update: 2020-01-10 18:27 GMT

ಕೌಲಾಲಂಪುರ, ಜ.10: ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಭಾರತೀಯ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಮಲೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಿಂದ ಹೊರ ನಡೆದಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.

ಇಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಸಿಂಧು ಅಗ್ರ ಶ್ರೇಯಾಂಕದ ಚೈನೀಸ್ ತೈಪೆಯ ತೈ ಝು ಯಿಂಗ್ ವಿರುದ್ಧ ಸೋತಿದ್ದಾರೆ. ಸೈನಾಗೆ ಸ್ಪೇನ್‌ನ ಒಲಿಂಪಿಕ್ಸ್ ಚಾಂಪಿಯನ್ ಕರೊಲಿನಾ ಮರಿನ್ ಮನೆ ಹಾದಿ ತೋರಿಸಿದರು.

 ಮರಿನ್‌ಗೆ ಯಾವುದೇ ರೀತಿಯ ಪೈಪೋಟಿ ನೀಡಲು ವಿಫಲವಾದ ಸೈನಾ ಸರಿಯಾಗಿ ಅರ್ಧಗಂಟೆ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 8-21, 7-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.2ನೇ ಆಟಗಾರ್ತಿ ಝು ಯಿಂಗ್ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸಿಂಧು ಅವರನ್ನು 21-16, 21-16 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸಿಂಧು ವಿರುದ್ಧ ಗೆಲುವಿನ ದಾಖಲೆಯನ್ನು 12-5ಕ್ಕೆ ವಿಸ್ತರಿಸಿದರು.

ಸಿಂಧು ಸತತ ಎರಡನೇ ಬಾರಿ ವಿರುದ್ಧ ಸೋತಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು. ಸಿಂಧು ಆರಂಭದಲ್ಲೇ ತಪ್ಪೆಸಗಿದ್ದು, ಮುನ್ನಡೆಯನ್ನು ಕಾಯ್ದುಕೊಳ್ಳಲು ವಿಫಲರಾದರು. ಹೀಗಾಗಿ ಮೊದಲ ಪಂದ್ಯವನ್ನು 16-21 ಅಂತರದಿಂದ ಸೋತಿದ್ದಾರೆ. ಎರಡನೇ ಗೇಮ್‌ನಲ್ಲಿ ಸಿಂಧು ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದ ಯಿಂಗ್ 21-16 ಅಂತರದಿಂದ ಜಯ ಸಾಧಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಮರಿನ್ ಅವರು ಸೈನಾರನ್ನು ಸುಲಭವಾಗಿ ಸೋಲಿಸಿದರು. ಶುಕ್ರವಾರದ ಪಂದ್ಯಕ್ಕಿಂತ ಮೊದಲು ಸೈನಾ ಹಾಗೂ ಮರಿನ್ 6-6 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದರು. ಮರಿನ್ ಮೊದಲ ಗೇಮ್‌ನಲ್ಲಿ 10-6 ಅಂತರದಿಂದ ಮುನ್ನಡೆ ಸಾಧಿಸಿದಾಗ ಸೈನಾ ಹಿಂದಡಿ ಇಟ್ಟರು. ಅಂತಿಮವಾಗಿ ಮರಿನ್ ಮೊದಲ ಗೇಮ್‌ನ್ನು 21-8 ಅಂತರದಿಂದ ಗೆದ್ದುಕೊಂಡರು.

2ನೇ ಗೇಮ್‌ನಲ್ಲೂ ಸೈನಾ ಕಳಪೆ ಪ್ರದರ್ಶನ ಮುಂದುವರಿಸಿದರು. ಸೈನಾ ಸಾಕಷ್ಟು ಅನಗತ್ಯ ತಪ್ಪುಗಳನ್ನು ಎಸಗಿ ಮರಿನ್ ಸುಲಭವಾಗಿ 21-7 ಅಂತರದಿಂದ ಗೆಲುವು ಸಾಧಿಸಿ ಸೆಮಿ ಫೈನಲ್ ತಲುಪಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News