'ವಿಶ್ವವಿದ್ಯಾಲಯಗಳು ಜ್ಞಾನದೊಂದಿಗೆ ಅಭಿವೃದ್ಧಿಯ ಕೇಂದ್ರಗಳಾಗಲಿ'

Update: 2020-01-11 15:14 GMT

ಮಣಿಪಾಲ, ಜ.11: ನಮ್ಮ ವಿಶ್ವವಿದ್ಯಾಲಯಗಳು ಕೇವಲ ಶೈಕ್ಷಣಿಕ ಜ್ಞಾನ ಕೇಂದ್ರಗಳಾಗದೇ, ಅಭಿವೃದ್ಧಿಯ ಕೇಂದ್ರಗಳೂ ಆಗಬೇಕು. ಕಾಲೇಜುಗಳಲ್ಲಿ ಕಲಿಯುತ್ತಿರುವ ನಮ್ಮ ಯುವಕರು ದೇಶದ ಅಭಿವೃದ್ಧಿಗೆ ಬದಲಾವಣೆಯ ಹರಿಕಾರರಾಗಬೇಕು ಎಂದು ನಾಗಾಲ್ಯಾಂಡ್‌ನ ಮಾಜಿ ರಾಜ್ಯಪಾಲರಾದ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ.ಆಚಾರ್ಯ) ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ದಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಸಂಯುಕ್ತವಾಗಿ ಆಯೋಜಿಸಿದ 2020ನೇ ಸಾಲಿನ ‘ಹೊಸ ವರ್ಷದ ಪ್ರಶಸ್ತಿ’ಯನ್ನು ಐವರಲ್ಲಿ ಒಬ್ಬರಾಗಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಭಾರತ ಸರಕಾರವೇ ಬಿಡುಗಡೆಗೊಳಿಸಿರುವ ಅಂಕಿಅಂಶವೊಂದು ತಿಳಿಸಿರುವಂತೆ ನಮ್ಮ ದೇಶದ 800 ವಿವಿಗಳಿಂದ ಪದವಿ ಪಡೆಯುವ ಯುವಜನತೆಯಲ್ಲಿ ಶೇ.60ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇದರೊಂದಿಗೆ ಜೀವನದಲ್ಲಿ ಅಭಿವೃದ್ಧಿ ಸಾಧಿಸಿದ ಕೆಲವೇ ಕೆಲವು ಮಂದಿಗಳೂ ವ್ಯಕ್ತಿ ಕೇಂದ್ರಿತವಾಗಿದ್ದಾರೆ. ಹೀಗಾಗಿ ಭಾರತ ದೇಶ ಶ್ರೀಮಂತ, ಆದರೆ ಭಾರತೀಯರು ಬಡವರು ಆಗಿದ್ದಾರೆ. ದೇಶದ ಶೇ.6ರಷ್ಟು ಜನರ ಕೈಯಲ್ಲಿ ದೇಶದ ಶೇ.80ರಷ್ಟು ಶ್ರೀಮಂತಿಕೆ ಕೇಂದ್ರೀಕೃತವಾಗಿರುವುದು ದುರದೃಷ್ಟಕರ ಎಂದು ಆಚಾರ್ಯ ನುಡಿದರು.

ಸಾಧಕರು ನೀಡುವವರಾಗಬೇಕು. ಇಲ್ಲದಿದ್ದರೆ ಆತ ಶೋಷಕನಾಗುತ್ತಾನೆ ಹಾಗೂ ಹಣಗಳಿಸುವುದೇ ಆತನ ಗುರಿಯಾಗುತ್ತದೆ. ‘ಕಾಯಕವೇ ಕೈಲಾಸ’ ಎಂಬುದು ನಮ್ಮ ಧ್ಯೇಯವಾಗಬೇಕು. ವಿವಿಗಳಿಂದ ಹೊರಬರುವ ಸಬಲೀಕರಣಗೊಂಡ ಯುವಜನತೆ ದೇಶಕ್ಕೆ ಹೊರೆಯಾಗಬಾರದು. ಅವರು ತಮ್ಮ ಸಬಲೀಕರಣಗೊಂಡ ಜ್ಞಾನದ ಮೂಲಕ ದೇಶದ ಆಸ್ತಿಯಾಗಬೇಕು ಎಂದು ಪಿ.ಬಿ.ಆಚಾರ್ಯ ಯುವಜನತೆಗೆ ಕಿವಿಮಾತು ಹೇಳಿದರು.

ಪ್ರಶಸ್ತಿ ವಿಜೇತ ಮತ್ತೊಬ್ಬ ಸಾಧಕರಾದ ಮಾಜಿ ಶಾಸಕ, ರಾಜ್ಯದ ಮೂರನೇ ಹಣಕಾಸು ಆಯೋಗದ ಅಧ್ಯಕ್ಷ ಹಾಗೂ ಪ್ರಗತಿಪರ ಕೃಷಿಕ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ.ಜಿ.ಕೊಡ್ಗಿ) ಮಾತನಾಡಿ, ದೇಶದ ಬೆನ್ನೆಲುಬಾದ ಗ್ರಾಪಂಗಳ ಕಾರ್ಯಗಳಿಗೆ ಪೂರಕವಾದ ಗ್ರಾಮೀಣಾಭಿವೃದ್ಧಿಯೊಂದಿಗೆ ರಾಷ್ಟ್ರಾಭಿವೃದ್ಧಿಯಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಮೂಡುಬಿದ್ರೆ ಆಳ್ವಾಸ್ ಎಜ್ಯುಕೇಷನ್ ಫೌಂಡೇಷನ್‌ನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮುಂಬಯಿಯ ಪಂಜಾಬ್ ನೇಷನಲ್ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೆ.ಆರ್.ಕಾಮತ್ ಹಾಗೂ ಖ್ಯಾತ ವೈದ್ಯ, ಕೆಎಂಸಿ ಮಣಿಪಾಲದ ಒಬಿಜಿ ವಿಭಾಗದ ಪ್ರೊಪೆಸರ್ ಡಾ.ಪ್ರತಾಪ್‌ಕುಮಾರ್ ನಾರಾಯಣ್ ಇವರನ್ನು ಸಹ ‘ಹೊಸ ವರ್ಷದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಎಂಇಎಂಜಿಯ ಅಧ್ಯಕ್ಷ ಹಾಗೂ ಮಣಿಪಾಲ ಅಕಾಡೆಮಿ ಆಫ್ ಜನರಲ್‌ಎಜ್ಯುಕೇಷನ್‌ನ ರಿಜಿಸ್ಟ್ರಾರ್ ಡಾ.ರಂಜನ್ ಆರ್. ಪೈ, ಮಾಹೆ ಟ್ರಸ್ಟ್‌ನ ಟ್ರಸ್ಟಿಗಳಲ್ಲೊಬ್ಬರಾದ ವಸಂತಿ ಆರ್.ಪೈ, ಅಕಾಡೆಮಿಯ ಉಪಾಧ್ಯಕ್ಷ ಹಾಗೂ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಎಂಡಿ ಟಿ.ಸತೀಶ್ ಯು. ಪೈ, ಡಾ.ಟಿಎಂಎ ಪೈ ಫೌಂಡೇಷನ್‌ನ ಕಾರ್ಯದರ್ಶಿ ಮತ್ತು ಖಂಜಾಚಿ ಟಿ.ಅಶೋಕ್ ಪೈ ಅವರು ಪಿ.ಬಿ.ಆಚಾರ್ಯ ಹಾಗೂ ಎ.ಜಿ.ಕೊಡ್ಗಿ ಅವರನ್ನು ಸನ್ಮಾನಿಸಿದರು.

ಸಿಂಡಿಕೇಟ್ ಬ್ಯಾಂಕಿನ ಜಿಎಂ ಭಾಸ್ಕರ ಹಂದೆ, ಮಾಹೆಯ ಪ್ರೊ ಚಾನ್ಸಲರ್ ಹಾಗೂ ಅಕಾಡೆಮಿಯ ಅಧ್ಯಕ್ಷ ಡಾ.ಎಚ್.ಎಸ್. ಬಲ್ಲಾಳ್, ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಕೆ.ಆರ್.ಕಾಮತ್, ಡಾ.ಎಂ. ಮೋಹನ್ ಆಳ್ವ ಹಾಗೂ ಡಾ. ಪ್ರತಾಪ್‌ ಕುಮಾರ್ ಅವರನ್ನು ಸ್ಮರಣಿಕೆ, ಫಲಕ ಹಾಗೂ ಫಲಪುಷ್ಪಗಳನ್ನು ನೀಡಿ ಗೌರವಿಸಿದರು.

ಡಾ.ಎಚ್.ಎಸ್.ಬಲ್ಲಾಳ್ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಶೃಂಗೇರಿ ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಸ್ವಾಮಿ ವಂದಿಸಿದರು. ಮಣಿಪಾಲ ಎಂಸಿಎಚ್‌ಪಿಯ ಫಿಸಿಯೋಥೆರಪಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಿವೇದಿತಾ ಎಸ್.ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News