ಉಗ್ರರ ಜತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಶಸ್ತಿ ವಿಜೇತ ಡಿವೈಎಸ್ಪಿ

Update: 2020-01-12 03:38 GMT

ಶ್ರೀನಗರ, ಜ.12: ಇಬ್ಬರು ಹಿಜ್‌ಬುಲ್ ಮುಜಾಹಿದೀನ್ ಉಗ್ರರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿಯನ್ನು ಕುಲಗಾಮ್ ಜಿಲ್ಲೆಯ ಖಾಜಿಗುಂಡ್ ಪ್ರದೇಶದ ಮೀರ್ ಬಜಾರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಡಿವೈಎಸ್ಪಿ ದೇವಿಂದರ್ ಸಿಂಗ್ ಡಿವೈಎಸ್ಪಿ ಹುದ್ದೆಯಲ್ಲಿದ್ದು, ಕಳೆದ ವರ್ಷದ ಆಗಸ್ಟ್ 15ರಂದು ರಾಷ್ಟ್ರಪತಿಗಳಿಂದ ಪೊಲೀಸ್ ಪದಕ ಪಡೆದ ಗೌರವಕ್ಕೆ ಪಾತ್ರರಾಗಿದ್ದ ಅಧಿಕಾರಿ. ದಕ್ಷಿಣ ಕಾಶ್ಮೀರ ಡಿಐಜಿ ಅತುಲ್ ಗೋಯಲ್ ನೇತೃತ್ವದ ತಂಡ ನವೀದ್ ಬಾಬು ಹಾಗೂ ಆಸೀಫ್ ರಾಥೆರ್ ಎಂಬುವವರನ್ನೂ ಬಂಧಿಸಿದೆ. ನವೀದ್ ಹಿಜ್‌ಬುಲ್ ಕಮಾಂಡರ್ ಆಗಿದ್ದರೆ ರಾಥೆರ್, ಮೂರು ವರ್ಷಗಳ ಹಿಂದೆ ಸಂಘಟನೆ ಸೇರಿದ್ದ ಪಟ್ಟಿ ಮಾಡಲ್ಪಟ್ಟ ಉಗ್ರ. ಇಬ್ಬರೂ ಶೋಪಿಯಾನ್ ಮೂಲದವರು. ಬಿಳಿ ಬಣ್ಣದ ಮಾರುತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಂದ ಎರಡು ಎಕೆ-47 ರೈಫಲ್ ಮತ್ತು ಕೈಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಅಪಹರಣ ತಡೆ ವಿಭಾಗದ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಂಗ್ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದರು. ಇದಕ್ಕೂ ಮುನ್ನ 1994ರಲ್ಲಿ ರಚನೆಯಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಓಜಿ) ತಂಡದಲ್ಲೂ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಅನಿರೀಕ್ಷಿತ ಭಡ್ತಿ ಪಡೆದು ಡಿವೈಎಸ್ಪಿ ಆಗಿದ್ದರು.

ಆದರೆ ಈ ಹುದ್ದೆಯಲ್ಲಿದ್ದಾಗ ಸುಲಿಗೆ ಆರೋಪದಲ್ಲಿ ಇವರನ್ನು ಅಮಾನತುಗೊಳಿಸಲಾಗಿತ್ತು. ಸಿಂಗ್ ಬಂಧನದ ಬಳಿಕ ಅವರ ಮನೆ ಮೇಲೆ ದಾಳಿ ನಡೆಸಿ ಒಂದು ಎಕೆ-47 ರೈಫಲ್, ಎರಡು ಪಿಸ್ತೂಲ್ ಹಾಗೂ ಮೂರು ಕೈಬಾಂಬ್ ವಶಪಡಿಸಿಕೊಳ್ಳಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಶ್ರೀನಗರದಲ್ಲಿ ಅತ್ಯಧಿಕ ಭದ್ರತೆಯ ಶಿವಪುರ ಪ್ರದೇಶದಲ್ಲಿ ಅಂದರೆ ಸೇನಾ ಕೇಂದ್ರ ಕಚೇರಿ ಇರುವ ಬಾದಾಮಿಬಾಗ್ ಬಳಿ ಸಿಂಗ್ ವಾಸವಿದ್ದರು. ಜಮ್ಮುವಿಗೆ ಭೇಟಿ ನೀಡುವ ಸಲುವಾಗಿ ಸಿಂಗ್ ನಾಲ್ಕು ದಿನ ರಜೆಯ ಮೇಲಿದ್ದರು ಎಂದು ತಿಳಿದುಬಂದಿದೆ.

ಕುತೂಹಲದ ವಿಚಾರವೆಂದರೆ ಹಿಜ್ಬುಲ್ ಸಂಘಟನೆಯ ದಕ್ಷಿಣ ಕಾಶ್ಮೀರ ಕಾರ್ಯಾಚರಣೆ ಕಮಾಂಡರ್ ನವೀದ್ ಕೂಡಾ ಮಾಜಿ ಪೊಲೀಸ್ ಪೇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News