ತ್ರಿವಳಿ ತಲಾಕ್ ಮಸೂದೆ ಮಂಡನೆಗೆ ಮುನ್ನ ಸಚಿವಾಲಯಗಳನ್ನು ವಿಶ್ವಾಸಕ್ಕೆ ಪಡೆಯದ ಕಾನೂನು ಸಚಿವಾಲಯ!

Update: 2020-01-12 13:54 GMT

ಹೊಸದಿಲ್ಲಿ : ಕಳೆದ ವರ್ಷ ತ್ರಿವಳಿ ತಲಾಕ್ ಮಸೂದೆಗೆ ಅಂಗೀಕಾರ ನೀಡಿದ್ದ ಕೇಂದ್ರ ಕಾನೂನು ಸಚಿವಾಲಯವು ಈ ನಿಟ್ಟಿನಲ್ಲಿ ಸಂಬಂಧಿತ ಸಚಿವಾಲಯಗಳು, ಇಲಾಖೆಗಳು ಅಥವಾ ಯಾವುದೇ ರಾಜ್ಯ ಸರಕಾರವನ್ನು ವಿಶ್ವಾಸಕ್ಕೆ ಪಡೆದುಕೊಂಡಿರಲಿಲ್ಲ ಮತ್ತು ಅವುಗಳಿಂದ ಸಲಹೆ ಸೂಚನೆ ಸ್ವೀಕರಿಸಿಲ್ಲ ಎಂಬುದು  thewire.in ಆರ್ ಟಿಐ ಮೂಲಕ ಪಡೆದುಕೊಂಡ ವಿವರಗಳಿಂದ ತಿಳಿದು ಬಂದಿದೆ.

ತ್ರಿವಳಿ ತಲಾಕ್ ಮಸೂದೆ ಎಂದೂ ಕರೆಯಲ್ಪಡುವ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯಿದೆ, 2019 ಅನ್ನು  ಕಳೆದ ವರ್ಷದ ಜುಲೈ ತಿಂಗಳಲ್ಲಿ ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿ ನಂತರ ರಾಷ್ಟ್ರಪತಿಗಳ ಅಂಕಿತದೊಂದಿಗೆ ಈಗ ಕಾನೂನಾಗಿದೆ.

ಸಂಸತ್ತಿನಲ್ಲಿ ಮಸೂದೆ ಕುರಿತು ಚರ್ಚೆ ನಡೆದ ಸಂದರ್ಭ ಮಾತನಾಡಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಹಲವಾರು `ಸಂತ್ರಸ್ತರ' ಜತೆ  ಮಾತನಾಡಿದ ನಂತರವಷ್ಟೇ ಈ ಮಸೂದೆ ಮಂಡಿಸಲಾಗಿದೆ ಎಂದು ಹೇಳಿದ್ದರು.

ಆದರೆ ಕಾನೂನು ಸಚಿವಾಲಯ ಯಾವುದೇ ಇತರ ಸಚಿವಾಲಯ, ರಾಜ್ಯ ಸರಕಾರಗಳು ಯಾ ಇಲಾಖೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡಿರಲಿಲ್ಲ ಎಂದು ಈಗ ತಿಳಿದು ಬಂದಿದೆ. ಆದರೆ ಸಚಿವಾಲಯದ ಪ್ರಕಾರ ತ್ರಿವಳಿ ತಲಾಕ್ ಎಂಬ ನ್ಯಾಯೋಚಿತವಲ್ಲದ ಪದ್ಧತಿ ತುರ್ತಾಗಿ ಅಂತ್ಯ ಹಾಡಬೇಕಾಗಿದ್ದರಿಂದ ಯಾರನ್ನೂ ಸಂಪರ್ಕಿಸಲಾಗಿರಲಿಲ್ಲ ಎಂದು ಸಚಿವಾಲಯ ಸಬೂಬು ನೀಡಿದೆ ಎಂದು thewire.in ವರದಿ ತಿಳಿಸಿದೆ.

"ಮಸೂದೆಯ ಕರಡನ್ನು  ಎಲ್ಲಾ ಸಚಿವಾಲಯಗಳೂ, ಇಲಾಖೆಗಳೂ ರಾಜ್ಯ ಸರಕಾರಗಳಿಗೂ ಅದನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ಕಳುಹಿಸಲಾಗಿದೆ" ಎಂದು ಸಚಿವರ ಸಹಿಯಿರುವ ಟಿಪ್ಪಣಿ ಇದ್ದರೂ, "ಈ ಅಸಮರ್ಥನೀಯ ಪದ್ಧತಿಗೆ ಅಂತ್ಯ ಹಾಡಲು ತುರ್ತು ಅಗತ್ಯವಿರುವುದರಿಂದ ಅಂತರ-ಸಚಿವಾಲಯ ಚರ್ಚೆಗಳನ್ನು ನಡೆಸಲಾಗುವುದಿಲ್ಲ'' ಎಂದೂ ಅದರಲ್ಲಿ ಬರೆಯಲಾಗಿತ್ತು.

ಯಾವುದೇ ಮಸೂದೆಯನ್ನು ಮೊದಲು ಸಂಬಂಧಿತ ಸಚಿವಾಲಯ ಹಾಗೂ ಇಲಾಖೆಗೆ ಕಳುಹಿಸಿ ಅವರ ಸಲಹೆ ಸೂಚನೆ ಪಡೆಯಬೇಕೆಂಬ ಕಾನೂನು ಸಚಿವಾಲಯದ 2014ರ ಶಾಸಕಾಂಗ ಸಲಹಾ ನೀತಿಗೆ ಇದು ವಿರುದ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News