×
Ad

ಪೂರ್ಣ ಮೇಘಾಲಯ,ಅಸ್ಸಾಮನ್ನು ಸಿಎಎ ವ್ಯಾಪ್ತಿಯಿಂದ ಹೊರಗಿಡಿ: ಸಿಎಂ ಕಾನ್ರಾಡ್ ಸಂಗ್ಮಾ

Update: 2020-01-12 19:59 IST

ಶಿಲಾಂಗ್,ಜ.12: ಅನುಸೂಚಿತವಲ್ಲದ ಪ್ರದೇಶಗಳು ಸೇರಿದಂತೆ ಇಡೀ ಮೇಘಾಲಯವನ್ನು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವ್ಯಾಪ್ತಿಯಿಂದ ಹೊರಗಿರಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಅವರು ಹೇಳಿದ್ದಾರೆ. ಅಸ್ಸಾಮಿಗೂ ಇಂತಹುದೇ ವಿನಾಯಿತಿಯನ್ನು ನೀಡುವಂತೆ ಅವರು ಕೋರಿದ್ದಾರೆ.

ಮಣಿಪುರ,ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳನ್ನು ಹಾಗೂ ಮೇಘಾಲಯದ ಹೆಚ್ಚಿನ ಭಾಗವನ್ನು ಸಿಎಎ ವ್ಯಾಪ್ತಿಯಿಂದ ಹೊರಗಿರಿಸಿದ್ದಕ್ಕೆ ನಾವು ಕೇಂದ್ರಕ್ಕೆ ಕೃತಜ್ಞರಾಗಿದ್ದೇವೆ. ಆದರೆ ನಮ್ಮ ರಾಜ್ಯಕ್ಕೆ ಪೂರ್ಣ ವಿನಾಯಿತಿ ನೀಡಬೇಕು ಮತ್ತು ಅಸ್ಸಾಮಿಗೂ ಈ ಸೌಲಭ್ಯ ದೊರೆಯಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಶನಿವಾರ ವೆಸ್ಟ್ ಗ್ಯಾರೊ ಹಿಲ್ಸ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಗ್ಮಾ ಹೇಳಿದರು.

ಮೇಘಾಲಯದ ಅನುಸೂಚಿತವಲ್ಲದ ಪ್ರದೇಶಗಳು ರಾಜಧಾನಿ ಶಿಲಾಂಗ್‌ನ ವ್ಯಾಪ್ತಿಯಲ್ಲಿದ್ದು,ರಾಜ್ಯದ ಒಟ್ಟು ಭೂಭಾಗದ ಶೇ.3ರಷ್ಟಿವೆ. ರಾಜ್ಯದಲ್ಲಿ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಯ ಜಾರಿಗೆ ಕೋರಿ ಮೇಘಾಲಯ ವಿಧಾನಸಭೆಯು ಕಳೆದ ವಾರ ನಿರ್ಣಯವನ್ನು ಅಂಗೀಕರಿಸಿತ್ತು.

ನಮ್ಮ ಬೇಡಿಕೆ ದೃಢವಾಗಿದೆ ಮತ್ತು ಸಿಎಎಯಿಂದ ಸಂಪೂರ್ಣ ವಿನಾಯಿತಿ ದೊರೆಯುವವರೆಗೆ ಮತ್ತು ನಮ್ಮ ಜನರಿಗೆ ರಕ್ಷಣೆಯನ್ನು ಒದಗಿಸುವವರೆಗೆ ನಾವು ಕೇಂದ್ರದೊಂದಿಗೆ ಮಾತುಕತೆಗಳನ್ನು ಮುಂದುವರಿಸುತ್ತೇವೆ ಎಂದ ಸಂಗ್ಮಾ, ರಾಜ್ಯದ ಮೂಲನಿವಾಸಿಗಳ ಹಿತಾಸಕ್ತಿಗಳನ್ನು ರಕ್ಷಿಸುವಂತೆ ಗ್ರಾಮಗಳ ಮುಖ್ಯಸ್ಥರನ್ನು ಆಗ್ರಹಿಸಿದರು. ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿಯು ಮೇಘಾಲಯದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News