ಸೌರಾಷ್ಟ್ರ ದೊಡ್ಡ ಮೊತ್ತದ ಸವಾಲು

Update: 2020-01-12 18:23 GMT

ರಾಜ್‌ಕೋಟ್, ಜ.12: ರಣಜಿ ಟ್ರೋಫಿ ಐದನೇ ಸುತ್ತಿನ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಸೌರಾಷ್ಟ್ರ ತಂಡ ಚೇತೇಶ್ವರ ಪೂಜಾರ ಅವರ ದ್ವಿಶತಕ(248) ಮತ್ತು ಶೆಲ್ಡಾನ್ ಜಾಕ್ಸನ್ ಶತಕ(161) ನೆರವಿನಲ್ಲಿ ದೊಡ್ಡ ಮೊತ್ತದ ಸವಾಲನ್ನು ವಿಧಿಸಿದೆ.

ಪಂದ್ಯದ ಎರಡನೇ ದಿನವಾಗಿರುವ ರವಿವಾರ ಸೌರಾಷ್ಟ್ರ ತಂಡ 166 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 581 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ದಿನದಾಟದಂತ್ಯಕ್ಕೆ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 13 ರನ್ ಗಳಿಸಿದೆ.

 ಉತ್ತಮ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ (0) ಅವರು ಖಾತೆ ತೆರೆಯದೆ ಉನಾದ್ಕಟ್‌ರ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಸ್ನೇಲ್ ಪಾಟೇಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

ಪಡಿಕ್ಕಲ್ ಜೊತೆ ಇನಿಂಗ್ಸ್ ಆರಂಭಿಸಿದ್ದ ರವಿಕುಮಾರ್ ಸಮರ್ಥ (6) ಮತ್ತು ರೋಹನ್ ಕದಮ್(7) ಔಟಾಗದೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

<  ಪೂಜಾರ 13ನೇ ದ್ವಿಶತಕ: ಟೀಮ್ ಇಂಡಿಯಾದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ ಅವರು ಇಂದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 13ನೇ ದ್ವಿಶತಕ ದಾಖಲಿಸಿದರು. ಶನಿವಾರ 50ನೇ ಪ್ರಥಮ ದರ್ಜೆ ಕ್ರಿಕೆಟ್ ಶತಕದ ದಾಖಲೆ ಬರೆದಿದ್ದ ಪೂಜಾರ ರವಿವಾರ ಬ್ಯಾಟಿಂಗ್ ಮುಂದುವರಿಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ದ್ವಿಶತಕದ ದಾಖಲೆ ನಿರ್ಮಿಸಿದ್ದಾರೆ.

  248 ರನ್ (390ಎ, 24ಬೌ,1ಸಿ) ಗಳಿಸುವ ಮೂಲಕ ರಣಜಿಯಲ್ಲಿ ಏಳನೇ ದ್ವಿಶತಕ ದಾಖಲಿಸಿದ ಪೂಜಾರ ಅವರು ಅಜಯ್ ಶರ್ಮಾ ಮತ್ತು ಪಾರಸ್ ದೊಗ್ರಾ ಬಳಿಕ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದೇ ವೇಳೆ ಪೂಜಾರ ರಣಜಿಯಲ್ಲಿ 6,000 ರನ್‌ಗಳ ಮೈಲುಗಲ್ಲನ್ನು ತಲುಪಿದರು.

  ಮೊದಲ ದಿನದಾಟದಂತ್ಯಕ್ಕೆ ಸೌರಾಷ್ಟ್ರ 90 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 296 ರನ್ ಗಳಿಸಿತ್ತು. ಪೂಜಾರ 162 ಮತ್ತು ಜಾಕ್ಸನ್ 99 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಹಿರಿಯ ಆಟಗಾರ ಶೆಲ್ಡಾನ್ ಜಾಕ್ಸನ್ ಜೊತೆ ಪೂಜಾರ 3ನೇ ವಿಕೆಟ್‌ಗೆ 394 ರನ್‌ಗಳ ಜೊತೆಯಾಟ ನೀಡಿದರು.

ಅರ್ಪಿತ್ ವಾಸಾವದಾ 35 ರನ್, ಪ್ರೇರಕ್ ಮಂಕಡ್ ಔಟಾಗದೆ 86 ರನ್ ಗಳಿಸಿ ಸೌರಾಷ್ಟ್ರ ತಂಡದ ಮೊತ್ತವನ್ನು ಉಬ್ಬಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News