ಲಿಫ್ಟ್ ಬಳಸುವುದನ್ನು ಬಿಡಿ, ಮೆಟ್ಟಿಲುಗಳನ್ನು ಹತ್ತಿ.

Update: 2020-01-13 10:10 GMT

ನಮಗೆ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಿಳಿಯಬೇಕು. ವಿಜ್ಞಾನವೂ ಇದನ್ನೇ ಹೇಳುತ್ತದೆ. ಆದರೆ ಹೆಚ್ಚಿನವರು ಮೊದಲ ಮಹಡಿಗೆ ತೆರಳಲೂ ಲಿಫ್ಟ್ಟ್‌ಗಳನ್ನೇ ಬಳಸುತ್ತಾರೆ. ಹೆಚ್ಚಿನ ಪ್ರಯತ್ನಗಳನ್ನು ಮಾಡದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಪೂರ್ಣರಾಗಿರುವುದು ನಮ್ಮ ದಿನನಿತ್ಯದ ಮಂತ್ರವಾಗಿರಬೇಕು ಮತ್ತು ಈ ನಿಟ್ಟಿನಲ್ಲಿ ಮಹಡಿ ಮೆಟ್ಟಿಲುಗಳು ಅತ್ಯಂತ ಸೂಕ್ತವಾಗಿವೆ. ಮೆಟ್ಟಿಲುಗಳನ್ನು ಹತ್ತಿಳಿಯುವುದರಿಂದ ನಾವು ಹಲವಾರು ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿ ದಿನ ಕೆಲವು ಮೆಟ್ಟಿಲುಗಳನ್ನು ಹತ್ತಿಳಿಯುವುದನ್ನು ರೂಢಿಸಿಕೊಂಡರೆ ಬೇರೆ ವ್ಯಾಯಾಮದ ಅಗತ್ಯವೇ ಇಲ್ಲ. ಅದು ವ್ಯಾಯಾಮಕ್ಕಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚು ಶ್ರಮವನ್ನೂ ಬೇಡುವುದಿಲ್ಲ. ಲಿಫ್ಟ್‌ನ ಬದಲು ಮೆಟ್ಟಿಲುಗಳನ್ನು ಬಳಸುವುದರಿಂದ ನಮ್ಮ ಶರೀರಕ್ಕೆ ದೊರೆಯುವ ಆರೋಗ್ಯಲಾಭಗಳು ಇಲ್ಲಿವೆ.....

►ಹೃದಯಕ್ಕೆ ಒಳ್ಳೆಯದು

ಮೆಟ್ಟಿಲುಗಳನ್ನು ಹತ್ತುವುದನ್ನು ಒಳ್ಳೆಯ ಹೃದಯನಾಳೀಯ ಚಟುವಟಿಕೆ ಎಂದು ಪರಿಗಣಿಸಲಾಗಿದೆ. ಅದು ಯಾವುದೇ ಗಂಭೀರ ಅನಾರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನೂ ತಗ್ಗಿಸುತ್ತದೆ.

►ಶರೀರದ ತೂಕ ಇಳಿಸಿಕೊಳ್ಳಲು ಸಹಕಾರಿ

ಮೆಟ್ಟಿಲುಗಳನ್ನು ಹಲವಾರು ಸಲ ಹತ್ತಿಳಿಯುವ ಮೂಲಕ ಅದನ್ನೇ ಒಂದು ನಿಯಮಿತ ವ್ಯಾಯಾಮವನ್ನಾಗಿ ಮಾಡಿಕೊಳ್ಳಬಹುದು. ಇದು ತೂಕವನ್ನು ಕಡಿಮೆ ಮಾಡಲು ಮತ್ತು ಶರೀರದ ಮಾಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

►ಕ್ರಿಯಾತ್ಮಕ ಚಟುವಟಿಕೆಯನ್ನಾಗಿ ಮಾಡಿಕೊಳ್ಳಿ

ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ಕ್ರಿಯಾತ್ಮಕ ಚಟುವಟಿಕೆಯೂ ಆಗುತ್ತದೆ. ಲಿಫ್ಟ್ ಹತ್ತುವುದನ್ನು ಬಿಟ್ಟು ಮೆಟ್ಟಿಲುಗಳನ್ನು ಹತ್ತುವುದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಶರೀರದಲ್ಲಿಯ ಕೀಲುಗಳು ಸುಸ್ಥಿತಿಯಲ್ಲಿರುತ್ತವೆ.

►ಆಯುಷ್ಯವನ್ನು ಹೆಚ್ಚಿಸುತ್ತದೆ

ದಿನಕ್ಕೆ ಸಾಕಷ್ಟು ಬಾರಿ ಮೆಟ್ಟಿಲುಗಳನ್ನು ಹತ್ತಿಳಿಯುತ್ತಿದ್ದರೆ ಆಯುಷ್ಯವು ಹೆಚ್ಚುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಪ್ರತಿದಿನ ಕೇವಲ ಏಳು ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುತ್ತಿದ್ದರೆ ಹೃದಯಾಘಾತದ ಅಪಾಯವು ಕಡಿಮೆಯಾಗುತ್ತದೆ.

►ಅಸ್ಥಿರಂಧ್ರತೆಯ ಅಪಾಯವನ್ನು ತಗ್ಗಿಸುತ್ತದೆ

ಪ್ರತಿ ದಿನ ಮೆಟ್ಟಿಲುಗಳನ್ನು ಬಳಸುತ್ತಿದ್ದರೆ ಅಸ್ಥಿರಂಧ್ರತೆಗೆ ಗುರಿಯಾಗುವ ಅಪಾಯವು ಕಡಿಮೆಯಾಗುತ್ತದೆ. ಅಸ್ಥಿರಂಧ್ರತೆಯು ಸಂಧಿವಾತದ ಅತ್ಯಂತ ಸಾಮಾನ್ಯ ರೂಪವಾಗಿದೆ.

►ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು

ಯಾವುದೇ ವಿಧದ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ನಮ್ಮ ಮಾನಸಿಕ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಮೆಟ್ಟಿಲುಗಳನ್ನು ಹತ್ತುವುದು ಇದಕ್ಕೆ ಪೂರಕವಾಗಿದೆ. ಪ್ರತಿದಿನ ಈ ಕೆಲಸವನ್ನು ಮಾಡಲು ಹೆಚ್ಚುವರಿ ಸಮಯ ಬೇಕಾಗಿಲ್ಲ. ಮಾನಸಿಕವಾಗಿ ಆರೋಗ್ಯಪೂರ್ಣರಾಗಿರಲು ಇದು ಅತ್ಯುತ್ತಮ ಮಾರ್ಗವಾಗಿದೆ.

►ಶ್ವಾಸಕೋಶಗಳಿಗೆ ಒಳ್ಳೆಯದು

ಮೆಟ್ಟಿಲುಗಳನ್ನು ಹತ್ತುವುದು ನಮ್ಮ ಶ್ವಾಸಕೋಶಗಳು ಮತ್ತು ಹೃದಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಅದು ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೆಟ್ಟಿಲುಗಳನ್ನು ಹತ್ತುವುದಲ್ಲಿ ದೊಡ್ಡ ಲಾಭವೆಂದರೆ ಅದು ರಸ್ತೆಯಲ್ಲಿ ವಾಕಿಂಗ್ ಅಥವಾ ರನ್ನಿಂಗ್ ಮಾಡುವುದಕ್ಕಿಂತ ಹೆಚ್ಚು ಸುರಕ್ಷಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News