ವಿವೇಕಾನಂದರು ಕೋಟ್ಯಂತರ ಯುವಕರಿಗೆ ಪ್ರೇರಣೆ: ಶಾಸಕ ಕಾಮತ್

Update: 2020-01-14 08:43 GMT

ಮಂಗಳೂರು, ಜ.14: ಸ್ವಾಮಿ ವಿವೇಕಾನಂದ ಭಾರತೀಯ ನೆಲದ ಗುಣ, ಸಂಸ್ಕೃತಿಯನ್ನು ವಿಶ್ವದ ವೇದಿಕೆಯಲ್ಲಿ ತೆರೆದಿಟ್ಟು ದೇಶ ಪ್ರಜ್ವಲಿಸುವಂತೆ ಮಾಡಿದ ಧೀಮಂತ, ಮಹಾಪುರುಷ. ಅವರು ಕೋಟ್ಯಂತರ ಯುವಕರಿಗೆ ಸ್ಫೂರ್ತಿದಾಯಕ ಪ್ರೇರಣೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಯುವ ಕಾರ್ಯ-ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಮಂಗಳೂರು ಘಟಕ, ಮಂಗಳೂರು ವಿಶ್ವವಿದ್ಯಾನಿಲಯದ ಎನ್ನೆಸ್ಸೆಸ್ ಘಟಕ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ, ಜಿಲ್ಲಾ ಯುವಜನ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಯುವ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾಜದ ಕಟ್ಟ ಕಡೆಯ ಜನರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯುವಕ ಮಂಡಳಿ ಸಂಘಗಳಿಗೆ ಸ್ವಾಮಿ ವಿವೇಕಾನಂದರೇ ಪ್ರೇರಣೆಯಾಗಿದ್ದಾರೆ ಎಂದರು.

ಯುವಕಾರ್ಯ-ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಮಂಗಳೂರು ಘಟಕವು ದೇಶದಲ್ಲಿಯೇ ಅಭೂತಪೂರ್ವ ಸಾಧನೆ ಮಾಡಿರುವುದಾಗಿ ಕೇಂದ್ರದ ಕ್ರೀಡಾ ಸಚಿವರೇ ಘೋಷಿಸಿದ್ದಾರೆ. ಜಿಲ್ಲೆಯ ನೆಹರೂ ಯುವ ಕೇಂದ್ರ ಘಟಕವು ದೇಶಕ್ಕೆ ಮಾದರಿಯಾಗಿದೆ. ಯುವ ಜನಾಂಗಕ್ಕೆ ಸಂಬಂಧಿಸಿದ ಹೆಚ್ಚು ಕಾರ್ಯಕ್ರಮ ಆಯೋಜನೆ, ಯೋಜನೆಗಳ ಅನುಷ್ಠಾನ ನಿರ್ವಹಣೆ ಯಶಸ್ವಿಗೊಳಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇಂತಹ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿ ಎಂದು ಶಾಸಕರು ಶುಭ ಹಾರೈಸಿದರು.

ನೆಹರೂ ಯುವ ಕೇಂದ್ರದಿಂದ 2018-19ನೇ ಸಾಲಿನ ‘ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ’ಯನ್ನು ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ ಕನಕಮಜಲು ಸುಳ್ಯ ಯುವಕ ಮಂಡಳಿಗೆ ವಿತರಿಸಲಾಯಿತು.

ಪಕ್ಷಿಕೆರೆಯ ಶ್ರೀವಿನಾಯಕ ಮಿತ್ರ ಯುವಕ ಮಂಡಲ, ನೀರ್‌ಮಾರ್ಗದ ವೃಕ್ಷರಾಜ ಯುವಕ ಮಂಡಳ, ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಕ್ರಿಕೆಟ್ ಕ್ಲಬ್, ಬೆಳ್ತಂಗಡಿಯ ನೇತ್ರಾವತಿ ಕಿನಾರೆ ಕ್ರೀಡಾ ಸಂಘ, ಬೆಳ್ತಂಗಡಿ ಸವಣಾಲು ಗೋಪಾಲಕೃಷ್ಣ ಯುವಕ ಮಂಡಲಗಳಿಗೆ ಕೇರಂ ಬೋರ್ಡ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಸಲಕರಣೆಗಳನ್ನು ವಿತರಿಸಲಾಯತು.

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಪ್ರೊ.ವಿನಿತಾ ರೈ, ರದ್ದಿ ಪೇಪರ್ ಬಳಸಿ ಪೆನ್, ಪುಸ್ತಕ ತಯಾರಿಸುವ ಪೇಪರ್ ಸೀಡ್ ಕಂಪೆನಿಯ ಪಕ್ಷಿಕೆರೆ ನಿತಿನ್ ವಾಸ್, ದೆಹಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡ ಆದಿತ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸ್ವಚ್ಛ ಭಾರತ್ ಇಂಟೆನ್‌ಶಿಪ್ 2019ರ ಪ್ರಶಸ್ತಿಯನ್ನು ಪುತ್ತೂರಿನ ಷಣ್ಮುಖ ಯುವಕ ಮಂಡಲ, ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಕ್ರಿಕೆಟ್ ಕ್ಲಬ್, ಹಳೆಯಂಗಡಿಯ ಶ್ರೀವಿದ್ಯಾ ವಿನಾಯಕ ಯುವಕ ಮಂಡಲ, ಪಡೀಲ್‌ನ ಪ್ರಶಾಂತಿ ಯುವತಿ ಮಂಡಲಗಳು ಪಡೆದುಕೊಂಡವು.

ನೆಹರೂ ಯುವ ಕೇಂದ್ರದಿಂದ ಆಯೋಜಿಸಿದ್ದ ಭಾಷಣ ಕಲೆ ಸ್ಪರ್ಧೆ ‘ಡಿಕ್ಲೆಮೇಶನ್ ಕಂಟೆಸ್ಟ್-2019’ ಪ್ರಶಸ್ತಿಗೆ ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಜೊಯ್ಲಿನ್ ಲವಿತಾ, ಮಂಗಳೂರು ಕೆಎಂಸಿ ವಿದ್ಯಾರ್ಥಿ ದಿಗ್ವಿಜಯ್ ಭಾಜನರಾದರು.

ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ಎನ್.ಜಿ. ಮೋಹನ್, ಜಿಲ್ಲಾ ಆಯುಷ್ ಅಧಿಕಾರಿ ಮುಹಮ್ಮದ್ ಇಕ್ಬಾಲ್ ಕೆ., ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ನ್ಯಾಯವಾದಿ ದಿನಕರ ಶೆಟ್ಟಿ, ಮಂಗಳೂರು ವೃತ್ತದ ಮುಖ್ಯ ಅರಣ್ಯಾಧಿಕಾರಿ ಪ್ರಕಾಶ್ ಎಸ್. ನೆಟಾಲ್ಕರ್, ಮಂಗಳೂರು ತಹಶೀಲ್ದಾರ್ ಅನಂತ ಶಂಕರ, ಆಳ್ವಾಸ್ ಎಜುಕೇಶನ್ ಟ್ರಸ್ಟಿ ವಿವೇಕ್ ಆಳ್ವ, ನಿವೃತ್ತ ಕಸ್ಟಮ್ಸ್ ಅಧಿಕಾರಿ ಸುಭೋದಯ್, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನಾ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎನ್ನೆಸ್ಸೆಸ್ ಕಾರ್ಯಕರ್ತರು ಪ್ರಾರ್ಥಿಸಿದರು. ನೆಹರೂ ಯುವ ಕೇಂದ್ರ ಮಂಗಳೂರು ಘಟಕದ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್‌ಪೇಟೆ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News