ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕ ಮಹೋತ್ಸವ: ಪೂರ್ವಭಾವಿ ಸಭೆ

Update: 2020-01-14 11:26 GMT

ಕಾರ್ಕಳ, ಜ.14: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕ ಮಹೋತ್ಸವವು ಜನವರಿ 26ರಿಂದ ಐದು ದಿನಗಳ ಕಾಲ ನಡೆಯಲಿದೆ. ಎಲ್ಲರೂ ಸಹಕರಿಸುವಂತೆ ಬಸಿಲಿಕಾ ನಿರ್ದೇಶಕ, ಧರ್ಮ ಕೇಂದ್ರದ ಪ್ರಧಾನ ಗುರು ವಂ.ಜಾರ್ಜ್ ಡಿಸೋಜ ಕೋರಿದ್ದಾರೆ.

ಅವರು ಸೋಮವಾರ ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಮಹೋತ್ಸವದ ಪ್ರಯುಕ್ತ ನಿಟ್ಟೆ ಪಂಚಾಯತ್ ಹಾಗೂ ಚರ್ಚ್ ವತಿಯಿಂದ ಹಮ್ಮಿಕೊಂಡ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ವಾರ್ಷಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳುವರು. ಅದಕ್ಕೆ ಅನುಗುಣವಾಗಿ ಶೌಚಾಲಯ ಸಹಿತ ಸಕಲ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದಕ್ಕೆ ಪಂಚಾಯತ್ ಸಹಕಾರ ಅಗತ್ಯ. ಚರ್ಚ್ ವತಿಯಿಂದ ಆವರಣದೊಳಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೆ ಹೆಚ್ಚಿನ ಒತ್ತು ನೀಡುವಾಗಿ ತಿಳಿಸಿದರು.

ಗಣ್ಯರು ಆಗಮಿಸುವ ವಿಐಪಿ ರಸ್ತೆಯಲ್ಲಿ ದಾರಿ ದೀಪ ಹಾಗೂ ರಸ್ತೆಯ ಎರಡು ಭಾಗದಲ್ಲಿ ದಾರಿ ದೀಪ ಅಳವಡಿಕೆ, ಹೋಟೆಲ್‌ಗಳಿಗೆ ಪರವಾನಿಗೆ ನೀಡುವ ವೇಳೆ ಆಹಾರದ ಗುಣಮಟ್ಟ ಹಾಗೂ ಪಾರ್ಕಿಂಗ್ ಹಾಗೂ ಮನೆಗಳಿಗೆ ತೆರಳುವ ದಾರಿ ಮಧ್ಯೆ ಅಂಗಡಿ ಮಳಿಗೆ ಅವಕಾಶ ನೀಡದಂತೆ ಸಲಹೆ ನೀಡಿದರು. ಇದೇ ಸಂದರ್ಭ ಅರೋಗ್ಯಾಧಿಕಾರಿ ಮಾತನಾಡಿ, ತುರ್ತು ಚಿಕಿತ್ಸೆ ನೀಡಲು ಎರಡು ಕೇಂದ್ರಗಳನ್ನು ತೆರೆಯುವ ಅವಶ್ಯಕತೆ ಇದೆ. ಜೊತೆಗೆ ಸಿಬ್ಬಂದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಆರೋಗ್ಯ ದೃಷ್ಟಿಯಿಂದ ಅಹಾರವನ್ನು ತೆರದಿಟ್ಟು ಮಾರಾಟ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೆಸ್ಕಾಂ ಇಲಾಖಾಧಿಕಾರಿ ನಾರಾಯಣ್ ನಾಯ್ಕ್ ಮಾತನಾಡಿ, ಇಲಾಖೆಯಿಂದ ಸರ್ವ ರೀತಿಯ ಸಹಕಾರ ನೀಡಲಾಗುವುದು. ಆದರೆ ಟ್ರಾನ್ಸ್ ಫಾರ್ಮರ್, ಹೈ ಟೆನ್ಶನ್ ವಿದ್ಯುತ್ ಲೈನ್ ಕೆಳಭಾಗದಲ್ಲಿ ಮಳಿಗೆಗಳನ್ನು ತೆರೆಯಲು ಅವಕಾಶವಿಲ್ಲ ಎಂದರು.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಠಾಣಾಧಿಕಾರಿ ನಾಸಿರ್ ಹುಸೈನ್ ಮಾತನಾಡಿ, ಈಗಾಗಲೇ 10 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದಂತೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಕರ್ತವ್ಯ ನಿರ್ವಹಿಸಲಿದ್ದೇವೆ. ಅಗತ್ಯವಿದ್ದೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

ಜಾನ್ ಡಿಸೋಜ ಮಾತನಾಡಿ, ಚರ್ಚ್ ಆವರಣದೊಳಗೆ ನಿರ್ಮಿಸಲಾದ 15 ಅಡಿ ಎತ್ತರದ ಬಸಿಲಿಕಾ ಮಾದರಿಯ ಮೂರ್ತಿ ಲೋಕಾರ್ಪಣೆಯು ಜ.19ರ ಬೆಳಗ್ಗೆ 7:25ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್ ಅಗಮಿಸಲಿದ್ದಾರೆ ಎಂದರು.

ನಿಟ್ಟೆ ಗ್ರಾಪಂ ಅಧ್ಯಕ್ಷೆ ಸಬಿತಾ ಪೂಜಾರ್ತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪಂ ಉಪಾಧ್ಯಕ್ಷ ಗೋಪಾಲ ಶೆಟ್ಟಿ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜಗೋಪಾಲ ಭಂಡಾರಿ, ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಎ., ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ.ಸಂಜೀವ, ಕೇಮಾರು ವಿದ್ಯುತ್ ಸ್ಥಾವರ ಸಹಾಯಕ ಇಂಜಿನಿಯರ್ ಪೂಜನ್ ಎನ್., ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಹೇಮಂತ್, ನಿಟ್ಟೆ ಗ್ರಾಮಕರಣಿಕ ಆನಂದ್ ಬಿ., ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಹರೀಶ್ ಆಚಾರ್ಯ, ಸಹಾಯಕ ಧರ್ಮಗುರು ವಂ.ಮೆಲ್ವಿಲ್ ರೋಯ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

ನಿಟ್ಟೆ ಪಿಡಿಒ ಶೇಖರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News