ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ಪ್ರತಿಭಟನೆಗೆ ಅಡ್ಯಾರ್ ಕಣ್ಣೂರು ಸಜ್ಜು

Update: 2020-01-14 14:07 GMT

ಮಂಗಳೂರು, ಜ.14: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲಾ 'ದಿ ಮುಸ್ಲಿಂ ಸೆಂಟ್ರಲ್ ಕಮಿಟಿ'ಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಜ.15ರಂದು ಅಪರಾಹ್ನ 2:30ಕ್ಕೆ ನಡೆಯುವ ಪ್ರತಿಭಟನಾ ಸಮಾವೇಶಕ್ಕೆ ಅಡ್ಯಾರ್ ಕಣ್ಣೂರು ಸಜ್ಜಾಗಿದೆ.

ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಸುಮಾರು 1 ಲಕ್ಷ ಮಂದಿಯ ಸಮ್ಮುಖದಲ್ಲಿ ನಡೆಯುವ ಈ ಪ್ರತಿಭಟನಾ ಸಮಾವೇಶವು ‘ಇತಿಹಾಸ ನಿರ್ಮಿಸಬೇಕು ಮತ್ತು ವಿನಾ ಕಾರಣ ಎರಡು ಅಮಾಯಕ ಜೀವಗಳನ್ನು ಕಳಕೊಂಡ ಮಂಗಳೂರು’ ಜಿಲ್ಲೆಯ ಜಾತ್ಯತೀತ ಮನಸ್ಸುಗಳ ನೋವು ಎಷ್ಟು ಇದೆ ಎಂಬುದನ್ನು ವ್ಯಕ್ತಪಡಿಸಬೇಕು ಎಂಬ ನಿಟ್ಟಿನಲ್ಲಿ ಮುಸ್ಲಿಮರು ತಮ್ಮೆಲ್ಲಾ ಆಶಯ, ಭಿನ್ನತೆ, ಗುಂಪುಗಾರಿಕೆ, ಪಕ್ಷ, ಸಂಘಟನೆ ಇತ್ಯಾದಿ ಎಲ್ಲವನ್ನೂ ಮರೆತು ಒಗ್ಗೂಡಲು ಪಣತೊಟ್ಟಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳೇ ಸಾಕ್ಷಿಯಾಗುತ್ತಿವೆ. ಮುಸ್ಲಿಮರೊಂದಿಗೆ ಇತರ ಜಾತ್ಯತೀತ ಮನಸ್ಸುಗಳು ಕೂಡ ಈ ಸಮಾವೇಶಕ್ಕೆ ಧ್ಬನಿಗೂಡಿಸಿರುವುದು ಗಮನಾರ್ಹವಾಗಿದೆ.

*‘ಒಂದು ಕೈಯಲ್ಲಿ ರಾಷ್ಟ್ರದ್ವಜ, ಮತ್ತೊಂದು ಕೈಯಲ್ಲಿ ಸಂವಿಧಾನ, ಮನದಲ್ಲಿ ಅಹಿಂಸೆ, ಬಾಯಲ್ಲಿ ಜನಗಣ ಮನ...ವು ಸಮಾವೇಶದ ಧ್ಯೇಯ ವಾಕ್ಯವಾಗಿದ್ದು, ರಾಷ್ಟ್ರಧ್ವಜ ಹಾಗು ಮುಸ್ಲಿಂ ಸೆಂಟ್ರಲ್ ಕಮಿಟಿ ಸಿದ್ಧಪಡಿಸಿದ ಪ್ಲೆಕಾರ್ಡ್, ಘೋಷಣೆಗಳಿಗೆ ಮಾತ್ರ ಅವಕಾಶವಿದೆ. ಇತರ ಯಾವುದೇ ಪಕ್ಷ/ಸಂಘಟನೆಗಳ ಧ್ವಜ, ಘೋಷಣೆಗಳಿಗೆ ಅವಕಾಶವಿಲ್ಲ.

*ಬಿಸಿ ರೋಡ್ ಕಡೆಯಿಂದ ಬರುವವರಿಗೆ ಮೈದಾನದ ಎಡಬದಿಯಲ್ಲಿ ನಾಲ್ಕು ಹಾಗೂ ಮಂಗಳೂರು ಕಡೆಯಿಂದ ಬರುವವರಿಗೆ ಮೈದಾನದ ಎಡಬದಿಯಲ್ಲಿ ಮೂರು ಕಡೆ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್‌ಗೆ ‘ಪಿ1ರಿಂದ ಪಿ7’ರ ತನಕ ಸಂಖ್ಯೆಯನ್ನು ನಮೂದಿಸಲಾಗಿದೆ.

*ಸುಮಾರು 1,300 ಸಮವಸ್ತ್ರಧಾರಿ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಪ್ರಮುಖ ಗಣ್ಯರ ಆಸನಕ್ಕೆ ಸುಮಾರು 500 ಕುರ್ಚಿಗಳನ್ನು ಮೀಸಲಿಡಲಾಗಿದೆ.

*ಈ ಮಧ್ಯೆ ಜಿಲ್ಲೆಯ ನಾನಾ ಮೂಲೆಗಳಿಂದ ಪ್ರತಿಭಟನಾ ಸ್ಥಳಕ್ಕೆ ಬರಲು ಬಹುತೇಕ ಮಸೀದಿಗಳ ಆಡಳಿತ ಕಮಿಟಿ, ಸಂಘ-ಸಂಸ್ಥೆಗಳು ಉಚಿತ ವಾಹನಗಳ ವ್ಯವಸ್ಥೆ ಮಾಡಿವೆ.

*ಈ ಸಮಾವೇಶದಲ್ಲಿ ‘ನಾವು ಭಾರತೀಯರು’ ತಂಡದ ನಿವೃತ್ತ ಐಎಎಸ್ ಅಧಿಕಾರಿಗಳಾದ ಹರ್ಷ ಮಂದರ್ ಮತ್ತು ಕಣ್ಣನ್ ಗೋಪಿನಾಥನ್, ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳಿ ಮುಖ್ಯ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಖಾಝಿಗಳಾದ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್, ಸೈಯದ್ ಫಝಲ್ ಕೋಯಮ್ಮ ತಂಙಳ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯುಕೆ ಕಣಚೂರು  ಮೋನು, ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನಾ, ಕೆಥೋಲಿಕ್ ಸಭಾದ ಅಧ್ಯಕ್ಷ ಪಾವ್ಲ್ ರೂಫಿ ಡಿಕಾಸ್ತಾ, ಶಾಸಕರಾದ ಯುಟಿ ಖಾದರ್, ಬಿಎಂ ಫಾರೂಕ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುರ್ರಶೀದ್ ಝೈನಿ, ಕರ್ನಾಟಕ ಸಮಸ್ತ ಮುಶಾವರ ರಾಜ್ಯ ಕಾರ್ಯದರ್ಶಿ ಯುಕೆ ಅಬ್ದುಲ್ ಅಝೀಝ್ ದಾರಿಮಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಎಸ್‌ಕೆಎಸ್‌ಎಂ ದಾವಾ ಕಾರ್ಯದರ್ಶಿ ಎಂಜಿ ಮುಹಮ್ಮದ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಭಾಗವಹಿಸಲಿದ್ದಾರೆ.

ಪ್ರತಿಭಟನೆಗೆ ಬೆಂಬಲದ ಮಹಾಪೂರ

ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಪ್ರತಿಭಟನಾ ಸಮಾವೇಶಕ್ಕೆ ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಬೆಂಬಲದ ಮಹಾಪೂರವೇ ಹರಿದು ಬರುತ್ತಿವೆ. ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಅಡ್ಯಾರ್ ಕಣ್ಣೂರಿನತ್ತ ದಾಪುಗಾಲು ಹಾಕಲು ಮುಂದಾಗಿದ್ದಾರೆ.

*ದ.ಕ.ಜಿಲ್ಲಾ ಕಾಂಗ್ರೆಸ್: ಕೇಂದ್ರ ಸರಕಾರವು ಜಾರಿಗೆ ತರಲು ಉದ್ಧೇಶಿಸಿರುವ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಗಳ ವಿರುದ್ಧ ನಡೆಯುವ ಪ್ರತಿಭಟನೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಬೆಂಬಲ ಘೋಷಿಸಿದೆ. ಈ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು, ಕಾರ್ಪೊರೇಟರ್‌ಗಳು, ಜಿಪಂ, ತಾಪ, ಗ್ರಾಪಂ, ನಗರಸಭೆ, ಪುರಸಭೆ, ನಗರ ಪಂಚಾಯತ್ ಸದಸ್ಯರುಗಳು, ಪಕ್ಷದ ಮುಖಂಡರು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್‌ಎಸ್‌ಯುಐ, ಸೇವಾದಳ, ಅಲ್ಪಸಂಖ್ಯಾತ ಘಟಕ, ಪಕ್ಷದ ಹಿಂದುಳಿದ ವರ್ಗಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್‌ ಮನವಿ ಮಾಡಿದ್ದಾರೆ.

*ದ.ಕ.ಜಿಲ್ಲಾ ಎಸ್‌ಡಿಪಿಐ: ಎನ್‌ಆರ್‌ಸಿ ಮತ್ತು ಮಂಗಳೂರು ಗೋಲಿಬಾರ್-ಹಿಂಸಾಚಾರ-ಪೊಲೀಸ್ ದೌರ್ಜನ್ಯ ಖಂಡಿಸಿ ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಪ್ರತಿಭಟನೆಗೆ ದ.ಕ.ಜಿಲ್ಲಾ ಎಸ್‌ಡಿಪಿಐ ಸಂಪೂರ್ಣ ಬೆಂಬಲ ಘೋಷಿಸಿದೆ. ಇದೊಂದು ಐತಿಹಾಸಿಕ ಸಮ್ಮೇಳನವಾಗಿದೆ. ಇದರ ಯಶಸ್ಸಿಗೆ ಪಕ್ಷದ ಕೇಡರ್‌ಗಳು, ನಾಯಕರು, ಕಾರ್ಯಕರ್ತರು ಪಾಲ್ಗೊಂಡು ಶ್ರಮಿಸಬೇಕು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಕರೆ ನೀಡಿದ್ದಾರೆ.

*ಜಮಾಅತೆ ಇಸ್ಲಾಮೀ ಹಿಂದ್ ದ.ಕ.ಜಿಲ್ಲಾ ಸಮಿತಿ, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವ ಜನ ಸಂಘ ರಾಜ್ಯ ಸಮಿತಿ, ಸುನ್ನಿ ಕೋ ಆರ್ಡಿನೇಶನ್ ಕರ್ನಾಟಕ ಮತ್ತಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ.

*ಕುದ್ರೋಳಿ ಕಸಾಯಿ ಖಾನೆ ಬಂದ್: ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಪ್ರತಿಭಟನೆಯ ಯಶಸ್ಸಿಗಾಗಿ ಕುದ್ರೋಳಿಯ ಕಸಾಯಿ ಖಾನೆಯಲ್ಲಿ ಮಾಂಸದ ಮಾರಾಟ ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದು. ಹಾಗಾಗಿ ಎಲ್ಲರೂ ಬುಧವಾರ ಈ ಐತಿಹಾಸಿಕ ಸಮ್ಮೇಳನವನ್ನು ಯಶಸ್ಸಿಗೊಳಿಸಬೇಕು ಎಂದು ಕುದ್ರೋಳಿಯ ಜಮೀಯ್ಯತುಸ್ಸಅದಾ ಸಂಘಟನೆಯ ಅಧ್ಯಕ್ಷ ಅಲಿ ಹಸನ್ ಕರೆ ನೀಡಿದ್ದಾರೆ.

*ವಾಹನ ಸಂಚಾರದಲ್ಲಿ ಮಾರ್ಪಾಡು

ಪ್ರತಿಭಟನಾ ಸಮಾವೇಶದ ಹಿನ್ನಲೆಯಲ್ಲಿ ಜ.15ರ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ರಸ್ತೆ ಸಂಚಾರದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬಿಸಿರೋಡ್‌ನಿಂದ ಮಂಗಳೂರಿಗೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.

*ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ ಮೂಲಕ ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಸಬೇಕು.

* ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ಕೊಣಾಜೆ-ತೊಕ್ಕೊಟ್ಟು ಮೂಲಕ ಮೆಲ್ಕಾರ್-ಬಿ.ಸಿರೋಡ್‌ನಲ್ಲಿ ತಿರುಗಿ ಮಂಗಳೂರು ನಗರಕ್ಕೆ ಪ್ರವೇಶಿಸಬೇಕು.

* ಮಂಗಳೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ನಂತೂರಿನಲ್ಲಿ ತಿರುವು ಪಡೆದು ಪಂಪ್‌ವೆಲ್-ತೊಕ್ಕೊಟ್ಟು-ಕೊಣಾಜೆ-ಬಿ.ಸಿ ರೋಡ್ ಮೂಲಕ ಸಾಗಬೇಕು.

* ಬಿ.ಸಿರೋಡ್‌ನಿಂದ ಮಂಗಳೂರಿಗೆ ಬರುವ ವಾಹನಗಳು ಪೊಳಲಿ- ಕೈಕಂಬ ಮೂಲಕ ಪ್ರಯಾಣಿಸಬಹುದು.

**ಸಮಾವೇಶದಲ್ಲಿ ಭಾಗವಹಿಸಲಿಚ್ಛಿಸುವ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
* ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳೂರಿನಿಂದ ಬರುವ ಎಲ್ಲಾ ದ್ವಿಚಕ್ರ ವಾಹನಗಳನ್ನು ಜಾಗ್ವಾರ್ ಶೋ ರೂಂ ಮುಂದಿನ ಮೈದಾನದಲ್ಲಿ ನಿಲ್ಲಿಸಬೇಕು.
* ಮಂಗಳೂರಿನಿಂದ ಬರುವ ಎಲ್ಲಾ ಕಾರುಗಳನ್ನು ಸೆಝ್ಯೂರ್ ಬೀಡಿ ಮೈದಾನದಲ್ಲಿ ನಿಲ್ಲಿಸಬೇಕು.
* ಮಂಗಳೂರು ಮತ್ತು ಬಿಸಿ ರೋಡ್‌ನಿಂದ ಬರುವ ಎಲ್ಲಾ ಬಸ್‌ಗಳನ್ನು ಮೊಹತಿಶಾಮ್ ಮೈದಾನದಲ್ಲಿ ಪಾರ್ಕ್ ಮಾಡಬೇಕು.
* ಬಿಸಿ ರೋಡ್‌ನಿಂದ ಬರುವ ಎಲ್ಲಾ ದ್ವಿಚಕ್ರ ವಾಹನಗಳನ್ನು ಕಾಂಬ್ಲಿ ಮೈದಾನದಲ್ಲಿ ನಿಲ್ಲಿಸಬೇಕು.
* ಬಿ.ಸಿ ರೋಡ್‌ನಿಂದ ಬರುವ ಎಲ್ಲಾ ಕಾರುಗಳು ಮತ್ತು ಇತರ ನಾಲ್ಕು ಚಕ್ರ ವಾಹನಗಳನ್ನು ಅಡ್ಯಾರ್ ಕಟ್ಟೆ ಜುಮಾ ಮಸೀದಿಯ ಮೈದಾನದಲ್ಲಿ ನಿಲ್ಲಿಸಬೇಕು.
*ಬಿ.ಸಿ ರೋಡ್ ಮತ್ತು ಫರಂಗಿಪೇಟೆ ಕಡೆಯಿಂದ ಬರುವ ಬಸ್‌ಗಳನ್ನು ಹೆರಿಟೇಟ್ ಗ್ರೌಂಡ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಬೇಕು.
*ಎಲ್ಲಾ ಪೊಲೀಸ್ ಮತ್ತು ತುರ್ತು ವಾಹನಗಳನ್ನು ವೆಲ್ರಿಂಗ್ ಪಾರ್ಕಿಂಗ್ ಮತ್ತು ಶಂಕರ್ ವಿಠಲ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗುವುದು.

ಭಾರೀ ಪೊಲೀಸ್ ಭದ್ರತೆ

ಅಡ್ಯಾರ್‌ನಲ್ಲಿ ಬುಧವಾರ ನಡೆಯುವ ಪ್ರತಿಭಟನಾ ಸಮಾವೇಶದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚ ರಿಕೆ ಕ್ರಮವಾಗಿ ಎಡಿಜಿಪಿ, ಐಜಿಪಿ, 11 ಎಸ್ಪಿ, 18 ಎಎಸ್ಪಿ, 100 ಡಿವೈಎಸ್ಪಿ, 300 ಇನ್‌ಸ್ಪೆಕ್ಟರ್, 500 ಎಸ್ಸೈ ಸಹಿತ 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯದ ಎಲ್ಲಾ ಐಜಿಪಿ ವಲಯಗಳಿಂದ ಪೊಲೀಸರು ಆಗಮಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದ ಪೊಲೀಸ್ ಮೈದಾನದಲ್ಲಿ ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳ ರೋಲ್ ಕಾಲ್ ಪರೇಡ್ ನಡೆಸಲಾಗಿದೆ. ನಗರದ ವಿವಿಧ ಕಡೆ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿ ಪಥಸಂಚಲನ ನಡೆಸಿದ್ದಾರೆ. ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಯೂ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News