‘ಯುವಜನತೆ-ಶಿಕ್ಷಣಕ್ಕೆ ಮಹತ್ವ ನೀಡಿದ್ದ ವಿವೇಕಾನಂದರು’

Update: 2020-01-14 15:07 GMT

 ಮಂಗಳೂರು, ಜ.14: ಶಿಕ್ಷಣ ಎಂದರೆ ವ್ಯಕ್ತಿತ್ವ ನಿರ್ಮಾಣ. ಶಿಕ್ಷಣದಿಂದ ವ್ಯಕ್ತಿ ತಾನು ಮಾನಸಿಕ, ಆಧ್ಯಾತ್ಮಿಕ, ಬೌದ್ಧಿಕವಾಗಿ ಔನತ್ಯಕ್ಕೆ ಏರುವುದಲ್ಲದೆ, ಇತರರನ್ನೂ ಉನ್ನತಿಯತ್ತ ಕೊಂಡೊಯ್ಯುತ್ತಾನೆ. ಸ್ವಾಮಿ ವಿವೇಕಾನಂದರು ಯುವಜನತೆ ಹಾಗೂ ಶಿಕ್ಷಣಕ್ಕೆ ಮಹತ್ವ ನೀಡಿದ್ದರು ಎಂದು ಶಾಲಾ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ತಿಳಿಸಿದ್ದಾರೆ.

 ಶಕ್ತಿನಗರದ ಶಕ್ತಿ ಶಾಲೆಯಲ್ಲಿ ಮಂಗಳವಾರ ಬೆಳಗ್ಗೆ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲರು, ವಿವೇಕಾನಂದರು ಸದ್‌ಚಿಂತನೆಯ ಮೂಲಕ ಯುವಜನತೆಯಲ್ಲಿ ರಾಷ್ಟ್ರ ನಿರ್ಮಾಣದ ಕಿಚ್ಚು ಹಚ್ಚಿದವರು. ಅವರು ಸಾರಿದ ತತ್ವಗಳು, ಮಾಡಿದ ಭಾಷಣಗಳು ಕೇವಲ ಭಾರತಕ್ಕಷ್ಟೇ ಅಲ್ಲದೆ ರಾಷ್ಟ್ರಾತೀತ ಎಂದರು.

ಸ್ವಾಮಿ ವಿವೇಕಾನಂದರು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಆದರೆ ಮಾನವೀಯ ಮೌಲ್ಯಗಳು ನಶಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು, ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕ, ಮಹಾತ್ಮರ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸಗಳನ್ನು ವಿದ್ಯಾರ್ಥಿ ರೂಢಿಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಗಳ ಬಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ವಿವೇಕಾನಂದರ ವೇಷ ಧರಿಸಿ ಅವರ ಜೀವನದ ಕುರಿತು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರೀಟಾ ನಿರೂಪಿಸಿದರು. ಶ್ರೇಷ್ಠ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News