ಅಧಿಕಾರಿಗಳ ಹೊಂದಾಣಿಕೆ ಕೊರತೆ ಜನರಿಗೆ ಸಮಸ್ಯೆ ತರದಿರಲಿ ಶಾಸಕ ನಾಯ್ಕ್ ಸೂಚನೆ

Update: 2020-01-14 15:11 GMT

ಬಂಟ್ವಾಳ, ಜ. 14: ಸರಕಾರ ಕೋಟ್ಯಾಂತರ ರೂ. ವ್ಯಯಮಾಡಿ ಯೋಜನೆಯನ್ನು ಜಾರಿಗೊಳಿಸುತ್ತದೆ. ಆದರೆ, ಅಧಿಕಾರಿಗಳ ಬೇಜಾವಬ್ದಾರಿಯಿಂದಾಗಿ ಅದು ಜನಸಾಮಾನ್ಯರ ಸದುಪಯೋಗಕ್ಕೆ ಸಿಗುತ್ತಿಲ್ಲ. ಇಲಾಖಾ ಅಧಿಕಾರಿಗಳ ನಡುವಿನ  ಹೊಂದಾಣಿ ಕೆಯ ಕೊರತೆ ಜನರಿಗೆ ಸಮಸ್ಯೆ ತರಬಾರದು. ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿ.ಸಿ.ರೋಡಿನ ಎಸ್‍ಜಿಎಸ್‍ಆರ್‍ವೈ ಸಭಾಂಗಣದಲ್ಲಿ ಮಂಗಳವಾರ ನಡೆದ ಬಂಟ್ವಾಳ ತಾಲೂಕು  ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮೆಸ್ಕಾಂ ಇಲಾಖೆಯ ಪ್ರಗತಿ ವರದಿಯನ್ನು ಆಲಿಸಿದ ಬಳಿಕ ಸಜಿಪ ಮುನ್ನೂರು ಗ್ರಾಮದ ಏತನೀರಾವರಿ ಯೋಜನೆಗೆ ಅಳವಡಿಸಲಾದ ಟ್ರಾನ್ಸ್‍ಫಾರ್ಮರ್ ಕೆಟ್ಟುಹೋಗಿ ಒಂದೂವರೆ ತಿಂಗಳಿ ನಿಂದ ಸ್ಥಳೀಯರಿಗೆ ನೀರಿನ ಸಮಸ್ಯೆ ಉಂಟಾದರೂ, ಟ್ರಾನ್ಸ್ ಫಾರ್ಮರನ್ನು ದುರಸ್ತಿ ಮಾಡುವುದು ಅಥವಾ ಬದಲಾಯಿಸದ ಬಗ್ಗೆ ಶಾಸಕರು ಮೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದಿರುವುದಾಗಿ ಪ್ರತಿಕ್ರಿಯೆಗೆ ಗರಂ ಆದ ಶಾಸಕರು, ಕುಡಿಯುವ ನೀರಿನ ವಿಚಾರದಲ್ಲಿ ತುರ್ತು ಅಗತ್ಯವಿದೆ. ಈಗಿನ ಕಾಲದಲ್ಲೂ ಪತ್ರ ಬರೆದು ಕೊಂಡು ಕೂತಿದ್ದೀರಲ್ಲಾ ಎಂದು ಪ್ರಶ್ನಿಸಿದರಲ್ಲದೆ, ಕಳೆದ ಒಂದೂವರೆ ತಿಂಗಳಿಂದ ಆಸುಪಾಸಿನ ಗ್ರಾಮಗಳಲ್ಲಿ ಜನರು ನೀರಿನ ಬವಣೆಯನ್ನು ಜನರು ಎದುರಿಸುತ್ತಿದ್ದಾರೆ. ವಾರದೊಳಗೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ವರದಿ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ಮೆಸ್ಕಾಂ ಅಧಿಕಾರಿಗೆ ತಾಕೀತು ಮಾಡಿದರು.

ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ ಹಾಗೂ ಎಂ.ಎಸ್.ಮಹಮ್ಮದ್ ಅವರು ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಮಾತೃಪೂರ್ಣ ಯೋಜನೆಯನ್ನು ಕರಾವಳಿ ಜಿಲ್ಲೆಗೆ ಅನುಗು ಣವಾಗಿ ಮಾರ್ಪಾಡು  ಮಾಡಬೇಕೆಂಬುದನ್ನು ಸಭೆಗೆ ತಿಳಿಸಿದಾಗ, ಈ ಬಗ್ಗೆ ಈಗಾಗಲೇ ಇಲಾಖಾ ಸಚಿವರ ಗಮನಕ್ಕೆ ತರಲಾ ಗಿದೆ ಎಂದು ಸಿಡಿಪಿಒ ಅವರು ಮಾಹಿತಿ ನೀಡಿದರು.

ವಾಮದಪದವಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಎರಡು ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳು ಶಾಸಕರ ಗಮನ ಸೆಳೆದರು ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ಬಗ್ಗೆ ವಿವರ ನೀಡುವಂತೆ ತಿಳಿಸಿದ ಶಾಸಕರು, ಈ ಬಗ್ಗೆ ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೆಎಸ್ಸಾರ್ಟಿಸಿ ಅದಾಲತ್ 

ಕೆಎಸ್ಸಾರ್ಟಿಸಿ ಬಸ್‍ಗಳ ಸಮಸ್ಯೆ ಗ್ರಾಮೀಣ ಮಟ್ಟದಲ್ಲಿ ಬಾಧಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಮುಂದಿನವಾರವೇ ಪ್ರತ್ಯೇಕ ಕೆಎಸ್ಸಾರ್ಟಿಸಿ ಅದಾಲತ್ ಅನ್ನು ನಡೆಸುವಂತೆ ಶಾಸಕರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ ಇದರಲ್ಲಿ ಕೆಎಸ್ಸಾರ್ಟಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳೂ ಭಾಗವಹಿಸುವಂತೆ ಸೂಚನೆ ನೀಡಿದರು.

ಭತ್ತದ ಬೆಳೆಯಲ್ಲಿ ಹೆಚ್ಚಳ

ತಾಲೂಕಿನಲ್ಲಿ ಭತ್ತದ ಬೆಳೆ ಕಳೆದ ಸಾಲಿಗಿಂತ ಈ ಬಾರಿ ಹೆಚ್ಚಾಗಿದೆ. ಒಟ್ಟು 3500 ಹೇಕ್ಟರ್‍ನ ಪೈಕಿ 2350 ಹೇಕ್ಟರ್‍ನಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಸಹಕಾರದಿಂದ ಹಡೀಲ್ ಗದ್ದೆಯಲ್ಲು ಭತ್ತದಬೆಳೆ ಬೆಳೆಸುವ ಕಾರ್ಯ ನಡೆಸಲಾಗಿದೆ ಎಂದು ಕೃಷಿ ಅಧಿಕಾರಿ ನಾರಾಯಣ ಶೆಟ್ಡಿ ಸಭೆಗೆ ಮಾಹಿತಿ ನೀಡಿದರು.

ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆ ಕಾಮಗಾರಿಯಿಂದ ಧೂಳು ಮತ್ತಿತರ ತೊಂದರೆಯ ಬಗ್ಗೆ ಅವರು ರಾ.ಹೆ.ಇಲಾಖಾಧಿಕಾರಿಯ ಗಮನಕ್ಕೆ ತಂದಾಗ, ಜನರು ನಿಮ್ಮನ್ನು ಮಾತ್ರವಲ್ಲ. ಸರ್ ನಮ್ಮನ್ನು ಬಿಟ್ಟಿಲ್ಲ. ನಮಗೂ ಬೈತ್ತಾರೆ ಎಂದರು. ಆಗ ಸಭೆ ನಗೆಗಡಲಲ್ಲಿ ತೇಲಿತು. ಶಾಸಕ ರಾಜೇಶ್ ನಾಯ್ಕ ಅವರು ಕೂಡ ಜಿಪಂ ಸದಸ್ಯ ತುಂಗಪ್ಪ ಬಂಗೇರರ ಮಾತಿಗೆ ಧ್ವನಿಗೂಡಿಸಿದರು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ  ಮಲ್ಲಿಕಾ ಶೆಟ್ಟಿ, ತಹಶೀಲ್ದಾರ್ ರಶ್ಮೀ ಎಸ್.ಆರ್. ವೇದಿಕೆಯಲ್ಲಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಪುರಸಭೆಗೆ ತ್ಯಾಜ್ಯ ವಿಲೇವಾರಿದ್ದೆ ದೊಡ್ಡ ಸಮಸ್ಯೆ

ಪುದು ಗ್ರಾಮದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪುರಸಭೆಯಿಂದ ವಿಲೇವಾರಿ ಮಾಡಲು ತಾಪಂ ಇಒ ಅವರು ಸೂಚನೆ ನೀಡಿದ್ದಾರೆ. ಅಲ್ಲಿಯ ತ್ಯಾಜ್ಯವನ್ನು ವಿಲೇ ಮಾಡಲು ಅಡ್ಡಿ ಇಲ್ಲ. ಆದರೆ ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣವಾದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯವಿಲೇವಾರಿಗೆ ಅನುಮತಿ ತೆಗೆಸಿಕೊಂಡುವಂತೆ ಪುರಸಭೆಯ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಶಾಸಕರ ಗಮನಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪುರಸಭೆಗೆ ತ್ಯಾಜ್ಯ ವಿಲೇವಾರಿದ್ದೆ ದೊಡ್ಡ ಸಮಸ್ಯೆಯಾಗಿದ್ದು, ಮಂಗಳೂರು ಡಂಪಿಂಗ್ ಯಾಡ್9ನಲ್ಲು ತ್ಯಾಜ್ಯ ವಿಲೇಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ತಿಂಗಳು ಅವರ ಮನವೊಲಿಸುವುದೇ ಇನ್ನೊಂದು ತಲೆ ನೋವಾಗಿದ್ದು, ಮುಂದಿನ 15 ದಿನದೊಳಗೆ ಕಂಚಿನಡ್ಕಪದವು ತ್ಯಾಜ್ಯವಿಲೇವಾರಿ ಘಟಕದಲ್ಲಿಯೇ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಯವರಿಗೆ ಸೂಚನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News