ಇಂತಹ ನಟರು ಅನುಕರಣೀಯರೇ?

Update: 2020-01-14 18:30 GMT

ಮಾನ್ಯರೇ,
ತಮಿಳು ಸೂಪರ್ ಸ್ಟಾರ್ ಒಬ್ಬರ ಸಿನೆಮಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆರೋಪಿಗಳು, ಅಪರಾಧಿಗಳ ಎನ್‌ಕೌಂಟರ್‌ಗಳಿಗೆ, ಲಿಂಚಿಂಗ್‌ಗಳಿಗೆ ವಾಸ್ತವ ಜಗತ್ತಿನಲ್ಲಿ ಭಾರೀ ಚಪ್ಪಾಳೆಗಳು ಬೀಳುತ್ತಿರುವ ಈ ಕಾಲದಲ್ಲಿ ಬೆಳ್ಳಿತೆರೆಯ ಹೀರೋ ಸಹ ಅವನ್ನೇ ಮಾಡಿದರೆ ಒಂದು ಕ್ರೂರ ಕೃತ್ಯಕ್ಕೆ ಎರಡು ಕಡೆ ಅಂಗೀಕಾರದ ಮುದ್ರೆ ಬಿದ್ದಂತೆ ಆಗುವುದಿಲ್ಲವೇ? ಈ ಚಿತ್ರದ ಹೀರೋ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮಾನವ ಹಕ್ಕು ಹೋರಾಟಗಾರರನ್ನು ಒಂದೆಡೆ ಕೂಡಿ ಹಾಕಿ ಅವರಿಂದ ತನಗೆ ಬೇಕಾದುದನ್ನು ಬರೆಸಿಕೊಂಡು ಅಟ್ಟುತ್ತಾರೆ.

ಮೊದಲೇ ಪರಿಸರ, ಮಾನವ ಹಕ್ಕು ಹೋರಾಟಗಾರರಿಗೆ ಉಳಿಗಾಲವಿಲ್ಲದಾಗಿದೆ. ಕ್ರೂರಿ ಸರ್ವಾಧಿಕಾರಿಗಳು ಅವರನ್ನು ಜೈಲಿಗೆ ತುರುಕಿಯೂ, ಕೊಲೆ ಮಾಡಿಯೂ ಮುಗಿಸುತ್ತಿದ್ದಾರೆ. ಸಿನೆಮಾಗಳಲ್ಲೂ ಅದೇ ಸರಿ ಎಂದು ಬಿಂಬಿಸಬೇಕೇ? ಅದೂ ಸೋ ಕಾಲ್ಡ್ ವಿಶ್ವವಿಖ್ಯಾತ ಪರೋಪಕಾರಿ ಉದಾರಿ ನಟನ ಸಿನೆಮಾದಲ್ಲಿ?

ಆ ನಟ ಮೊದಲಿನಿಂದಲೂ ಫ್ಯೂಡಲ್ ಮನಸ್ಥಿತಿಯವರು. ಆದರೆ ನಿರ್ದೇಶಕರೂ ಇಷ್ಟು ಸಂವೇದನಾಶೂನ್ಯರಾದರೆ ಸಮಾಜದ ಗತಿ ಏನು? ಹಿಂದೆ ಪಾ. ರಂಜಿತ್ ಸಿನೆಮಾದಲ್ಲಿ ಶ್ವೇತವರ್ಣೀಯ ಮೇಲ್ವರ್ಗಗಳ ಕ್ರೌರ್ಯ ವಿಪಕ್ಷಗಳನ್ನು ಜಾಡಿಸಿ ಒದ್ದಿದ್ದ ನಾಯಕ ನಟ ಹೀಗೆ ಉಲ್ಟಾ ಹೊಡೆದಿರುವುದು ವ್ಯಕ್ತಿಗತವಾಗಿ ಇವರೆಂಥ ಸಿದ್ಧಾಂತವೂ ಇಲ್ಲದ ಸ್ವಯಂಕೇಂದ್ರಿತ ದರ್ಪಿಷ್ಟರೆಂಬುದನ್ನು ತೋರಿಸಿದೆ.

ಇತ್ತ ಕನ್ನಡದಲ್ಲಿ ಒಬ್ಬ ನಟ ನಿರ್ಭಯಾ ಅಪರಾಧಿಯ ವಧಾಕಾರನಿಗೆ ಒಂದು ಲಕ್ಷ ರೂ. ಕಾಣಿಕೆ ಕೊಡುತ್ತಾರಂತೆ. ಸಮಾಜದಲ್ಲಿ ಅಪರಾಧ ತಲೆ ಎತ್ತುವುದೇ ಇವರು ಇರುವ ರಾಜಕೀಯ ಪಕ್ಷದಂತಹ ಧೋರಣೆಗಳಿಂದ ಎಂಬುದು ಇವರಿಗೆ ಇನ್ನೂ ಅರಿವಾದಂತಿಲ್ಲವೇ?

ಇನ್ನು ಮಾನವತ್ವ ಪ್ರದರ್ಶಿಸಿದ್ದ ಯುವ ನಾಯಕರೊಬ್ಬರು ತನ್ನ 216 ಅಡಿ ಎತ್ತರದ ಕಟೌಟ್, 5,000 ಕೆಜಿ ಕೇಕ್‌ನೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಶಂಕರ್‌ನಾಗ್‌ರಂತಹ ಸರಳ ಮಾನವತಾವಾದಿ, ಪ್ರತಿಭಾ ಸಂಪನ್ನ ಮತ್ತೊಂದು ರೂಪದಲ್ಲಿ ಬರಬಾರದೇ ಅನ್ನಿಸುತ್ತಿದೆ.

Writer - -ಕಸ್ತೂರಿ, ತುಮಕೂರು

contributor

Editor - -ಕಸ್ತೂರಿ, ತುಮಕೂರು

contributor

Similar News