ರಾಷ್ಟ್ರೀಯತೆಯ ಮೇಲೆ ಹುಸಿ ದೇಶಪ್ರೇಮದ ಆಕ್ರಮಣ

Update: 2020-01-15 08:30 GMT

ನಮ್ಮ ಭವ್ಯ ಭಾರತದಲ್ಲಿ ಜನರ ಆಶೋತ್ತರಗಳನ್ನು ಪೂರೈಸಬೇಕಾದ ಸರಕಾರ ಇಂದು ಜನರ ಭಾವನೆ, ಭಕ್ತಿ, ಐಕ್ಯತೆ ಮತ್ತು ರಾಷ್ಟ್ರೀಯತೆಯ ಐಡೆಂಟಿಟಿಯನ್ನು ಹುಡುಕುತ್ತಾ ಜನರ ನೈಜ ಬದುಕು ಬವಣೆಯನ್ನು ಮರೆಮಾಚಿಸುತ್ತಿದೆ. ವಾಸ್ತವತೆಯನ್ನು ಮರೆಸಿ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಮುನ್ನ್ನೆಲೆಗೆ ತಂದು, ಬೇರೆಡೆಗೆ ಗಮನವನ್ನು ಸೆಳೆಯುತ್ತಾ, ಜನರ ಬದುಕನ್ನು ಭಾವನೆಯ ಬಾವಿಯೊಳಗೆ ನೂಕುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕಾದ ಕಾರ್ಯಾಂಗ ಇಂದು ಶಾಸಕಾಂಗದ ಎದುರು ಮಂಡಿಯೂರಿ ಕುಳಿತಿದೆ. ದ್ವೇಷದ ರಾಜಕಾರಣ, ಹೊಡೆದು ಆಳುವ ನೀತಿಯ ಕಪ್ಪುಕೋಣೆಯ ರಾಜಕಾರಣಕ್ಕೆ ಬಿಳಿ ಬೆಕ್ಕಿನಂತೆ ಇಂದು ಕಾರ್ಯಾಂಗ ಕೈಜೋಡಿಸಿದೆ. ಇವೆಲ್ಲವನ್ನು ನೋಡಿದರೆ, ಜನರು ಭಾವನಾತ್ಮಕವಾಗಿಯೇ ಬದುಕಬೇಕು ಕಾರ್ಯಾತ್ಮಕವಾಗಿ ಬದುಕಬಾರದೆಂಬ ರಥವನ್ನು ಶಾಸಕಾಂಗ ಮತ್ತು ಕಾರ್ಯಾಂಗ ತನ್ನ ಎರಡು ಕೈಗಳಿಂದ ಮುನ್ನಡೆಸುತ್ತಿದೆ. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯನ್ನು ನೋಡುತ್ತಿರುವ ಜನರು ಒಂದು ಕಡೆ ಕೌಟುಂಬಿಕ ಅಚ್ಚು ಕಟ್ಟಿನಲ್ಲಿ ಕುಳಿತು ತಮಗೆ ಸಂಬಂಧವಿಲ್ಲವೆಂದು ಒಂದು ಪಂಕ್ತಿ ಜನ ಇದ್ದರೆ, ಪಕ್ಕದಲ್ಲೇ ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿಯ ಪಂಕ್ತಿಯ ಜನ ವಿಜೃಂಭಿಸುತ್ತಿದ್ದಾರೆ. ಇದರ ವಿರುದ್ಧ ದನಿ ಎತ್ತುವವರ ದನಿಯನ್ನು ಸರಕಾರ ಮತ್ತು ಅದರ ಪಾಲುದಾರಿಕೆಯ ಅಧಿಕಾರಿಗಳು ಅಡಗಿಸುತ್ತಾ, ಅವರಿಗೆ ದೇಶದ್ರೋಹಿ ಪಟ್ಟ ಕೊಟ್ಟು, ದೇಶದ್ರೋಹದ ಪ್ರಕರಣವನ್ನು ಎಗ್ಗಿಲ್ಲದೆ ದಾಖಲಿಸುತ್ತಿದ್ದಾರೆ.

ಈ ದೇಶದ್ರೋಹ ಪರಿಚ್ಛೇದ 124ಎ ಯನ್ನು ಅಂದಿನ ಜವಾಹರಲಾಲ್ ನೆಹರೂರವರು 29ನೇ ಮೇ 1951ರಲ್ಲಿ ಸಂಸತ್ತನ್ನುದ್ದೇಶಿಸಿ ಮಾತನಾಡತ್ತಾ ‘‘ಭಾರತೀಯ ದಂಡ ಸಂಹಿತೆ ಪರಿಚ್ಛೇದ 124ಎ ತೆಗೆದುಕೊಳ್ಳಿ, ನನ್ನ ಮೇರೆಗೆ ಈ ನಿರ್ದಿಷ್ಟ ಪರಿಚ್ಛೇದ ತೀವ್ರ ಆಕ್ಷೇಪಣೆ ಮತ್ತು ಅಸಹ್ಯ ಹುಟ್ಟಿಸುವ ಕಾಯ್ದೆಯಾಗಿದೆ, ಯಾವುದೇ ಬಗೆಯ ವ್ಯಾವಹಾರಿಕ ಅಥವಾ ಚಾರಿತ್ರಿಕ ಕಾರಣವಿಲ್ಲದ ಈ ಕಾಯ್ದೆಗೆ, ನೀವು ಸಮ್ಮತಿಸುವುದಾದರೆ, ನಾವು ಅಂಗೀಕರಿಸುವ ಯಾವುದೇ ಕಾನೂನಿನ ಭಾಗದಲ್ಲಿ ಇದಕ್ಕೆ ಯಾವ ಅವಕಾಶ, ಸ್ಥಾನವೂ ಇರದಂತೆ ಕ್ರಮ ಕೈಗೊಳ್ಳಬಹುದು. ಎಷ್ಟು ಬೇಗ ಈ ಕಾಯ್ದೆಯನ್ನು ನಿವಾರಿಸಿಕೊಳ್ಳುತ್ತೇವೋ ಅಷ್ಟೂ ಒಳ್ಳೆಯದು. ಈ ವಿಚಾರದಲ್ಲಿ ಬೇರೆ ರೀತಿಯಲ್ಲಿ, ಅತ್ಯಂತ ಪರಿಮಿತ ಬಗೆಯಲ್ಲಿ, ಬೇರೆ ರಾಷ್ಟ್ರಗಳು ನಡೆದುಕೊಳ್ಳುತ್ತಿರುವಂತೆ ನಾವೂ ವ್ಯವಹರಿಸೋಣ, ಆದರೆ ಈ ಕಾಯ್ದೆಗೆ ಯಾವುದೇ ಸ್ಥಾನಮಾನ ಇರಬಾರದು. ಏಕೆಂದರೆ, ಈ ವಿಚಾರದಲ್ಲಿ ವೈವಿಧ್ಯಮಯವಾದ ಹಾಗೂ ಸಾಕಷ್ಟು ಅನುಭವವನ್ನು ನಾವೆಲ್ಲಾ ಅನುಭವಿಸಿದ್ದೇವೆ ಹಾಗೂ ಸಂದರ್ಭದ ತರ್ಕವೇನೇ ಇರಲಿ, ಅದರ ವಿರುದ್ಧವೇ ನಮ್ಮ ವಾದವಿದೆ’’ ಎಂದಿದ್ದಾರೆ.

  ಇಂದು ನಮ್ಮ ದೇಶದಲ್ಲಿ ಒಂದು ವಿಷಮ ಪರಿಸ್ಥಿತಿಯನ್ನು ನಮ್ಮನ್ನಾಳುವ ಸರಕಾರ ತಂದಿಟ್ಟಿದೆ. ತನ್ನನ್ನು ಪ್ರಶ್ನೆ ಮಾಡುವವರೆಲ್ಲರನ್ನೂ ದೇಶದ್ರೋಹಿ ಎಂದು ಬಿಂಬಿಸುತ್ತಾ, ತಾವು ಮಾತ್ರ ಈ ದೇಶದ ದೇಶಪ್ರೇಮಿಗಳೆಂಬ ಹುಸಿ ದೇಶಪ್ರೇಮವನ್ನು ಎಲ್ಲೆಡೆ ಪಸರಿಸುತ್ತಾ ಇದ್ದಾರೆ. ಈ ರಾಷ್ಟ್ರದ್ರೋಹದ ಕಾನೂನನ್ನು ಬ್ರಿಟಿಷ್ ವಸಾಹತುಶಾಹಿಯೂ ತಮ್ಮ ಅಧಿಕಾರಸ್ತಂಭವನ್ನು ಗಟ್ಟಿಗೊಳಿಸಲು ನಮ್ಮದೇ ದೇಶದ ನಾಯಕರ ವಿರುದ್ಧ ಬಳಸಿ ನಾಯಕರ ದನಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಗ್ರಹಿಸುತ್ತಿದ್ದರು. ಇಂದು ವಸಾಹತುಶಾಹಿ ಆಕ್ರಮಣದ ಕಲ್ಪನೆಯಿರುವ ನಮ್ಮ ಸರಕಾರಗಳು, ಧ್ವನಿ ಎತ್ತುವವರ ವಿರುದ್ಧ ಬಳಸುತ್ತಿದೆ. ಇಂತಹ ಪರಿಸ್ಥಿತಿಯನ್ನು ಕಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆಯವರು ‘‘ದೇಶ ಪ್ರಸ್ತುತ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಸಾಕಷ್ಟು ಹಿಂಸೆ ನಡೆದಿವೆ. ಇಂತಹ ಸನ್ನಿವೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯು ಸಾಂವಿಧಾನಿಕವಾಗಿದೆ ಎಂದು ಘೊಷಿಸಬೇಕು ಎನ್ನುವ ಅರ್ಜಿಯ ತುರ್ತು ವಿಚಾರಣೆ ಕೈಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ’’ ಎಂದು ಹೇಳಿದ್ದಾರೆ.

ಆದರೂ ಕೂಡ ಈ ಸಂಕಷ್ಟದ ಎದುರು ಕಾಯ್ದೆ ಜಾರಿಗೆ ತರುತ್ತೇವೆ ಎಂದು ಮೋದಿ-ಶಾ ಹೇಳುತ್ತಿರುವುದನ್ನು ನೋಡಿದರೆ ತನ್ನ ರಾಜ್ಯಕ್ಕೆ ಬೆಂಕಿ ಬಿದ್ದಾಗ ಸಂಗೀತ ನುಡಿಸುತ್ತಿದ್ದ ರೋಮ್ ದೊರೆ ಇಲ್ಲಿ ನೆನಪಾಗುತ್ತಿದ್ದಾರೆ. ಒಂದೆಡೆ ಸರಕಾರಗಳು ಜನರ ಮೇಲೆ ಸವಾರಿ ಮಾಡುತ್ತಿದ್ದರೆ ಮತ್ತೊಂದೆಡೆ ಸರಕಾರಗಳ ಪಾಲುದಾರರು ಭೂಮಿ ತಾಯಿಯನ್ನು ಬರಿದು ಮಾಡುತ್ತಿದ್ದಾರೆ. ತನ್ನ ಆಸೆಯ ವಿಸ್ತೀರ್ಣವನ್ನು ವಿಸ್ತರಿಸುತ್ತಾ ಭೂಮಿ ತಾಯಿಯ ಒಡಲನ್ನು ಬಗೆದು-ಬಗೆದು ಮುಂದಿನ ಪೀಳಿಗೆಗೆ ಭೂಮಿಯ ಗರ್ಭಕೋಶವನ್ನು ಕಾಣದಂತೆ ಮಾಡಲಾಗುತ್ತಿದೆ. ಇದನ್ನೆಲ್ಲ ಪ್ರತಿಭಟಿಸಬೇಕಾದ ನಾವೆಲ್ಲ ಇಂದು ನೈತಿಕ ಮೌಲ್ಯವನ್ನು ಅಪಹಾಸ್ಯ ಮಾಡಿ ಅದರಿಂದಾಚೆಗೆ ದೂರ ನಿಂತು ನಮಗೂ ಇದಕ್ಕೂ ಸಂಬಂಧವಿಲ್ಲವೆನೋ ಎಂದು ಪ್ರಕೃತಿಯ ಕೋಪವನ್ನು ಸ್ಪರ್ಶಿಸಿ ಅನುಭವಿಸುತ್ತಾ ಇದನ್ನೇ ಒಂದು ರೀತಿಯ ಫ್ಯಾಷನ್ ಲೋಕ ಎಂದು ತಿಳಿದು ನಡೆಯುತ್ತಿದ್ದೇವೆ.

ನಮ್ಮ ಅವನತಿಗೆ ನಾವೇ ದಾರಿ ಮಾಡಿಕೊಡುತ್ತಿದ್ದೇವೆ. ಮನುಷ್ಯನ ಈ ಆರ್ಭಟದಿಂದ ಪ್ರಕೃತಿ, ಪ್ರಾಣಿ ಸಂಕುಲದ ನಾಶದ ಜೊತೆಗೆ, ಸರಕಾರಗಳು ಉಳ್ಳವರು ಮಾತ್ರ ಈ ಭೂಮಿಯಲ್ಲಿ ಇರಬೇಕು ಎಂದು ಘೋಷ ವಾಕ್ಯದೊಡನೆ ಮಾನವ ಕುಲವನ್ನೇ ನಾಶ ಮಾಡಲು ಹೊರಟಿವೆ. ಇಂದು ನಮ್ಮ ಭಾರತದಲ್ಲಿ ಶಾಂತಿ ಬೋಧಿಸಿದ ಬುದ್ಧನ ವಿರುದ್ಧ ಅಶಾಂತಿ, ಅಹಿಂಸೆ ತೋರಿದ ಗಾಂಧಿಯ ವಿರುದ್ಧ ಹಿಂಸೆ, ಸಮಾನತೆ ಸಾರಿಗೆ ಬಸವಣ್ಣನ ವಿರುದ್ಧ ಅಸಮಾನತೆ, ಸಂವಿಧಾನ ಕೊಟ್ಟ ಅಂಬೇಡ್ಕರ್ ವಿರುದ್ಧ ಮನುಸ್ಮತಿ, ವಿಶ್ವಮಾನವ ಸಂದೇಶ ಸಾರಿಗೆ ಕುವೆಂಪು ವಿರುದ್ಧ ಅಲ್ಪಮಾನವರನ್ನು ಛೂಬಿಟ್ಟು ಸಮಾಜವನ್ನು ದಿಕ್ಕಿಲ್ಲದಂತೆ ಕೊಂಡೊಯ್ಯಲಾಗುತ್ತಿದೆ. ಇದೇನಾ ನಮ್ಮ ಹಿರಿಯರು ಕಟ್ಟಿದ ಭವ್ಯ ಭಾರತ?

Writer - ಪುನೀತ್ ಎನ್., ಮೈಸೂರು

contributor

Editor - ಪುನೀತ್ ಎನ್., ಮೈಸೂರು

contributor

Similar News